Sunday 25 October 2015

ಮೈ ಆಜಾದ್ ಹೂಂ... ಆಜಾದ್ ಹೀ ರಹೂಂಗಾ.. ಭಾಗ 1



ಸ್ವಾತಂತ್ರ್ಯ ಅಂದರೆ ನಮಗೇನು ನೆನಪಾಗುತ್ತೋ ಗೊತ್ತಿಲ್ಲ ಆದರೆ "ಆಜಾದ್" ಅಂದೊಡನೆ ನೆನಪಾಗೋದು " ಚಂದ್ರಶೇಖರ ಆಜಾದ್" ಸ್ವಾತಂತ್ರ್ಯದ ಕನಸು ಕಂಡ ಈ ಅಪ್ರತಿಮ ವೀರ ತನ್ನ ಹೆಸರಲ್ಲೇ ಸ್ವತಂತ್ರ್ಯವನ್ನು ಜೋಡಿಸಿ ಬಿಟ್ಟ...ತನ್ನ ಹದಿನಾರನೆಯ ವಯಸ್ಸಿನಲ್ಲಿ , ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾಗ ತನ್ನ ನಾಯಕನ ಮೇಲಾದ ಪೋಲೀಸ್ ದೌರ್ಜನ್ಯವನ್ನು ಕಂಡು ಸಹಿಸಲಾಗದೇ... ಆ ಪೋಲಿಸನ ಮೇಲೆ ಕಲ್ಲೆಸೆದು ಅದರ ಪರಿಣಾಮವಾಗಿ ಹನ್ನೆರಡು ಛಡಿ ಏಟಿನ ಶಿಕ್ಷೆಗೆ ಗುರಿಯಾದ....
ಈ ಘಟನೆಯ ಬಗ್ಗೆ ತನಿಖೆ ಆಗುತ್ತಿದ್ದಾಗ ಈ ಹುಡುಗ ಕೋರ್ಟಿಗೆ ನೀಡಿದ ಉತ್ತರವೇ ಇವನ ದೇಶ ಭಕ್ತಿ ಗೆ ಸಾಕ್ಷಿ...
ಮ್ಯಾಜಿಸ್ಟ್ರೇಟ್ : ಹೌದೇನೋ ಆ ಪೋಲೀಸನನ್ನು ಕಲ್ಲಿನಿಂದ ಹೊಡೆದದ್ದು ನಿಜವೇನೋ..
ಬಾಲಕ : ಹೌದು, ಅದು ನಿಜ, ನಾನು ತಪ್ಪು ಮಾಡಿದೆನೆಂದು ಈಗ ನನಗನ್ನಿಸುತ್ತಿದೆ...
ತನ್ನ ತಪ್ಪಿನ ಅರಿವಾಗುತ್ತಿದೆ ಎಂದು ಎಣಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಗೆ ನಿರಾಸೆ ಕಾದಿತ್ತು...
ಬಾಲಕ: ಕಲ್ಲಿನಿಂದ ಹೊಡೆಯಬಾರದಿತ್ತು... ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ನಾವು ಅಹಿಂಸಾ ವಾದಿಗಳೆಂದು ತಿಳಿದೇ ಪೋಲೀಸರು ರಾಕ್ಷಸರಂತೆ ನಡೆದುಕೊಳ್ಲುತ್ತಿದ್ದಾರೆ. ನಮ್ಮ ಧ್ವಜಕ್ಕೆ ಅವಮಾನ ಮಾಡಿ ನಮ್ಮ ಪೂಜ್ಯ ನಾಯಕರನ್ನು ಸಾಯ ಬಡಿದ ಇವನನ್ನು ನನ್ನ ಕೈಯಲ್ಲಿ ಪಿಸ್ತೂಲು ಇದ್ದಿದ್ದರೆ ಅಲ್ಲಿಯೇ ಗುಂಡಿಟ್ಟು ಸುಟ್ಟು ಹಾಕುತ್ತಿದ್ದೆ..
ಕೋಪಗೊಂಡ ಮ್ಯಾಜಿಸ್ಟ್ರೇಟರು ಮುಂದುವರೆಸುತ್ತಾ ಕೇಳುತ್ತಾರೆ...
ಮ್ಯಾ: ಹೇಳು ಏನು ನಿನ್ನ ಹೆಸರು
ಬಾ: (ಗಟ್ಟಿಯಾಗಿ ಗರ್ಜಿಸಿದ ) " ಆಜಾದ್"
ಮ್ಯಾ: ನಿನ್ನ ತಂದೆಯ ಹೆಸರೇನು..?
ಬಾ: ಸ್ವಾಧೀನತೆ..
ಮ್ಯಾ: ಸರಿಯಾಗಿ ಬೊಗಳು ಎಲ್ಲಿ ನಿನ್ನ ಮನೆ..
ಬಾ: ನನ್ನ ಮನೆ ಸೆರೆಮನೆ..
ಮ್ಯಾ: ಏನು ನಿನ್ನ ಕೆಲಸ
ಬಾ: ಬ್ರಿಟಿಷರನ್ನು ಭಾರತದಿಂದ ಹೊರಗಟ್ಟುವುದು...
ಅಂದಿನಿಂದ ಚಂದ್ರಶೇಖರ ಶರ್ಮಾ ... ಚಂದ್ರ ಶೇಖರ ಅಜಾದ್ ಆಗಿ ಹೋದ
ಹನ್ನೆರಡು ಛಡಿ ಏಟು ತಿಂದಾಗಲೂ ಈ ಎಳೆಯ ಆಜಾದ್ ನ ಕಣ್ನಲ್ಲಿ ರೋಷ ತುಂಬಿತ್ತು ವಿನಹಾ ಕಣ್ಣೀರು ಇರಲಿಲ್ಲ ... ಇನ್ನಷ್ಟು ಏಟು ತಿನ್ನಲು ನಾ ಸಿದ್ಧ ಎಂದ...ಈ ಘಟನೆಯ ನಂತರ ಸಾರ್ವಜನಿಕವಾಗಿ ಆತನನ್ನು ಸನ್ಮಾನಿಸಿದಾಗ ಆತನ ಬಾಯಿಂದ ಹೊರ ಬಿದ್ದ ಮಾತುಗಳಾದರೂ ಎಂಥವು...
" ದುಶ್ಮನೋಂಕೀ ಗೋಲಿಯೋಂಕೋ ಮೈ ಸಾಮ್ನಾ ಕರೂಂಗಾ .... ಅಜಾದ್ ಹೀ ರಹೂಂಗಾ... ಮೈ ಅಜಾದ್ ಹೀ ಮರೂಂಗಾ..."
ಅಬ್ಬಾ ಹದಿನಾರನೆಯ ವಯಸ್ಸಿನಲ್ಲಿ ಅದೆಂತಾ ಪ್ರೌಢಿಮೆ... ಅದೆಂತಾ ದೇಶ ಭಕ್ತಿ...ಅಂದು ಜೈಲಿನಿಂದ ಹೊರ ಬಂದ ನಂತರ ತನ್ನಲ್ಲಿ ತಾನೆ ಮಾಡಿಕೊಂಡ ಪ್ರತಿಜ್ನೆ " ಇನ್ನೆಂದಿಗೂ ಪೋಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ...
ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಅಜಾದ್... ಜಲಿಯನ್ ವಾಲ ಬಾಗ್ ದುರಂತದ ನಂತರ ನಿಧಾನವಾಗಿ ಕ್ರಾಂತಿಕಾರಿ ಯಾಗತೊಡಗಿದ. ಮಹಾನ್ ಕ್ರಾಂತಿಕಾರಿ ನಾಯಕ " ರಾಮ್ ಪ್ರಸಾದ್ ಬಿಸ್ಮಿಲ್" ಇವರ ಕೈಯಲ್ಲಿ ಪಳಗಿ ತನ್ನ ಗುರುವನ್ನೇ ಮೀರಿಸಿದ ಶಿಷ್ಯನಾದ ಬಗೆ ಅದ್ವಿತೀಯ....

No comments:

Post a Comment