Saturday 24 October 2015

ಅಡ್ವಾಣೀಜೀ ನಿಮ್ಮ ಕೈಯಾರೆ ನಿಮ್ಮ ಘನತೆ ಕಳಕೊಳ್ಳದಿರಿ..



ಭಾರತೀಯ ಜನತಾ ಪಾರ್ಟಿ ಅಂತದಕೂಡಲೇ ಬಹುಷ ಮೊತ್ತ ಮೊದಲಿಗೆ ನಮ್ಮ ಕಣ್ಣೆದುರಿಗೆ ಬರುವ ನಾಯಕರೆಂದರೆ ಅದು ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲ್ ಕೃಷ್ಣ ಅಡ್ವಾನಿ. ಈ ಮಾತಿನಲ್ಲಿ ಯಾರಿಗೂ ವಿರೋಧ ಇರಲಿಕ್ಕಿಲ್ಲ ಕಾರಣ ಈ ಪಕ್ಷವನ್ನ ಕಟ್ಟಿ ಬೆಳೆಸುವುದರಲ್ಲಿ ಇವರಿಬ್ಬರ ಪಾತ್ರ ಮಹತ್ತರದ್ದು. ಬಹುಷ ಇವರ ವ್ಯಕ್ತಿತ್ವದ ಆಕರ್ಷಣೆಗೊಳಗಾಗಿ ಅದೆಷ್ಟು ಜನ ಬಿಜೆಪಿಯನ್ನು ಸೇರಿದ್ದಾರೋ... ಲೆಕ್ಕ ಹಾಕೋದು ಕಷ್ಟ. ಕಾರಣ ಇವರಿಬ್ಬರದು ವಿಶಿಷ್ಟವಾದ ವ್ಯಕ್ತಿತ್ವ. ವಾಜಪೇಯಿ ಅವರದು ಅಜಾತಶತ್ರು ವ್ಯಕ್ತಿತ್ವವಾದರೆ ಅಡ್ವಾನಿ ಅವರು ಹಿರಿಯರಾಗಿದ್ದರೂ ಅಂದಿನ ಕಾಲಕ್ಕೆ ಬಿಸಿ ರಕ್ತದ ಹುಮ್ಮಸ್ಸಿನವರಾಗಿದ್ದರು. ಅದೇ ಕಾರಣದಿಂದಲೇನೋ ಅವರ ರಥ ಯಾತ್ರೆಗಳು ಜನರ ಮೇಲೆ ಗಾಢ ಪರಿಣಾಮ ಬೀರಿದ್ದು. ನಾಯಕತ್ವದ ಗುಣ ಅವರಲ್ಲಿ ಖಂಡಿತ ಇದೆ ಮತ್ತು ಅವರ ಮಾತಿಗೆ ಬೆಲೆ ಇಂದಿಗೂ ಇದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಯಾಕೋ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಕಾರಣ ಅವರ ಒಂದಷ್ಟು ಹೇಳಿಕೆಗಳು... ಒಂದಷ್ಟು ಬರಹಗಳು..
ಬಹುಷ ಅಡ್ವಾಣಿಯವರ ಬಗೆಗೆ ಮೊದಲ ಬಾರಿಗೆ ಜನ ಬೇಸರಗೊಂಡದ್ದು ಅಥವಾ ಅವರ ಪಕ್ಷ ಮುಜುಗರಕ್ಕೊಳಗಾದದ್ದು ಜಿನ್ನಾ ಅವರ ಬಗೆಗಿನ ಹೇಳಿಕೆಗಳ ಮೂಲಕ, ನನಗೂ ತುಂಬಾನೇ ಬೇಸರ ತರಿಸಿದ ಘಟನೆ ಅದು. ಕಾರಣ ಭಾರತದ ಅದೆಷ್ಟೋ ಜನ ದ್ವೇಷಿಸುತ್ತಿದ್ದ ವ್ಯಕ್ತಿಯನ್ನ ತಮ್ಮ ನಾಯಕ ಹೊಗಳಿದಾಗ ಜನರಿಗೆ ಬೇಸರ ಆಗೋದು ಸಹಜ. ಅದ್ಯಾಕೆ ಹೊಗಳಿದರೋ ದೇವರೆ ಬಲ್ಲ. ಅಂತಹಾ ಪರಿಸ್ಥಿತಿ ಏನಿತ್ತೋ ಗೊತ್ತಿಲ್ಲ, ಆದರೆ ಸದ್ಯಕ್ಕೆ ಆ ಘಟನೆಯನ್ನ ಇಲ್ಲಿ ಬಿಟ್ಟು ಬಿಡೋಣ ಕಾರಣ ಅದು ತುಂಬಾನೆ ಹಳತಾಯಿತು. ಇಲ್ಲಿ ಮತ್ತೆ ಅಡ್ವಾಣಿಜೀ ಅವರು ಭಾರತದ ಬಹುದೊಡ್ದ ಸಂಖ್ಯೆಯ ಜನರ ಭಾವನೆಗಳಿಗೆ ವಿರುದ್ಧವಾಗಿ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಅದ್ಯಾವ ಭಾವದಿಂದ ಹೇಳುತ್ತಾರೋ ಏನೋ... ಆದರೆ ಅವರ ಮಾತುಗಳನ್ನ ಮೀಡಿಯಾಗಳು ಪ್ರಸ್ತುತ ಪಡಿಸುವ ರೀತಿಯ ಬಗ್ಗೆ ಅವರಿಗೂ ಸಹ ಗೊತ್ತೇ ಇರುತ್ತೆ ಹಾಗಾಗಿ ಅಡ್ದ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರೆ ಅದರ ಲಾಭ ಪಡೆಯೋರು ಮೀಡಿಯಾದವರೆ. ಬದಲಾಗಿ ಸ್ಪಷ್ಟವಾಗಿ ಮತ್ತು ನೇರವಾಗಿ ಮಾತನಾಡುವಂತಹ ಕಾಲ ಸನ್ನಿಹಿತವಾಗಿದೆ ಅನ್ನೋದು ನನ್ನ ಭಾವನೆ.
ನರೇಂದ್ರ ಮೋದಿ.... ಬಹುಷ ಭಾರತದಲ್ಲಿನ ಬಹುಪಾಲು ಜನರಿಗೆ ಇವರೊಂದು ಆಶಾ ಕಿರಣ...ಸ್ವತಂತ್ರಗೊಂಡ ಭಾರತ ಮಾತೆಯನ್ನ ಈ ಕೈ ಪಡೆ ಅದ್ಯಾವ ರೀತಿ ಷೋಷಣೆ ಮಾಡುತ್ತಿದೆ, ಅನ್ನೋದು ಕಣ್ಣಿಗೆ ಕಾಣಿಸುವ ಸತ್ಯ. ಆ ಪರಿಸ್ಥಿತಿಯಿಂದ ಭಾರತವನ್ನ ಸುಸ್ಥಿತಿಯೆಡೆಗೆ ಕರೆತರಬೇಕಾದರೆ ಅದಕ್ಕೊಂದು ವಿಶೇಷ ವ್ಯಕ್ತಿತ್ವದ ಸಮರ್ಥ ವ್ಯಕ್ತಿ ಬೇಕಾಗಿದ್ದಾರೆ. ಹಾಗಂತ ಅಡ್ವಾನಿ ಅವರಲ್ಲಿ ಆ ವ್ಯಕ್ತಿತ್ವ ಅಥವಾ ಸಮರ್ಥತೆ ಇಲ್ಲ ಎಂದಲ್ಲ. ಆದರೆ ಜನರೆದುರು ಸಾಧಿಸಿ ತೋರಿಸಿರುವ ಮೋದಿ ಜೀ ಯವರ ಮೇಲೆ ನಂಬಿಕೆ ಚಿಗುರೊಡೆದಿದೆ. ಉದಾಹರಣೆಗೆ ಸಚಿನ್ ಶ್ರೇಷ್ಠ ಆಟಗಾರ ಆದರೂ ಧೋನಿಗೆ ನಾಯಕತ್ವ ಸಿಕ್ಕಿದೆ ಅಂತಂದರೆ ಆತನಿಗೆ ಎಲ್ಲೋ ಗೆಲುವನ್ನ ತಂದು ಕೊಡುವ ಜಾಣ್ಮೆ ಇದೆಯೆಂದೇ ಅರ್ಥ ವಿನಹಾ ಧೋನಿ ಸಚಿನ್ ಗಿಂತ ಶ್ರೇಷ್ಠ ಅಂತ ಆಗೋದಿಲ್ಲ ತಾನೇ... ಅದೇ ರೀತಿ ಇಂದಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಬೇಕಾಗಿರುವುದು ಮೋದಿಜಿಯವರ ನೇತೃತ್ವ. ಜನರ ಆಸೆ ಇದುವೇ ಅನ್ನೊದು ಅಡ್ವಾಣಿಗೇನು ತಿಳಿಯದ ವಿಷಯವಲ್ಲ.
ಅಡ್ವಾಣಿಜೀಯವರು ಸಮರ್ಥ ನಾಯಕರು ಅನ್ನೊದು ಸತ್ಯವಾದರೂ ಅವರ ಆಡಳಿತ ಶೈಲಿಯ ಬಗ್ಗೆ ಜನರಿಗೆ ಇದುವರೆಗೂ ಗೊತ್ತಿಲ್ಲ. ಆದರೆ ಮೋದಿಯವರು ಹಾಗಲ್ಲ ಸಾವಿರ ಸಮಸ್ಯೆಗಳ ಸರಮಾಲೆ ತನ್ನೆದುರಿಗಿದ್ದರೂ.... ಇಡಿಯ ವಿಶ್ವದ ವಿರೋಧದ ನಡುವೆಯೂ ಗುಜರಾತನ್ನ ಅಭಿವೃದ್ಧಿಯ ಪಥದಲ್ಲಿ ಸಾಗಿಸಿದವರು. ಒಂದು ಗಲಭೆ ಅವರನ್ನ ಅದೆಷ್ಟು ಕಾಡಿತೆಂದರೆ ನಿಜಕ್ಕೂ ಭಾರತದ ಯಾವೊಬ್ಬ ಮುಖ್ಯಮಂತ್ರಿಯೂ ಪಡಲಾರದಷ್ಟು ಕಷ್ಟಗಳನ್ನ ಪಟ್ಟರೂ. ಸದಾ ಟೀಕಿಸುವ ವಿರೋದ ಪಕ್ಷ, ಒಂದಲ್ಲ ಒಂದು ಕಾರಣ ಹೇಳಿ ಮೂದಲಿಸುವ ಮಾನವ ಹಕ್ಕುಗಳ ಆಯೋಗ... ಅವರಿವರ ಬೆಂಬಲ ಪಡೆದು ಹಾರಿ ಬೀಳುತ್ತಿದ್ದ ಸಾಮಾಜಿಕ ಕಾರ್ಯಕರ್ತರು... ಅವೆಲ್ಲಕ್ಕೂ ನಾಯಕ ಎಂಬಂತೆ ಏಕಪಕ್ಷೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಧ್ಯಮ ವೃಂದ. ಇವೆಲ್ಲವನ್ನು ಮೆಟ್ಟಿ ಗುಜರಾತನ್ನ ವಿಶ್ವವೇ ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿದ್ದಾರೆ ಅಂತಂದರೆ ಅವರ ಆಡಳಿತ ಶೈಲಿಗೆ ಜನ ಮನಸೋಲದಿರುತ್ತಾರೆಯೇ...? ಅವರ ದೂರದೃಷ್ಟಿತ್ವಕ್ಕೆ ಕೈ ಗನ್ನಡಿಯಂತಿದೆ ಹಲವು ಯೋಜನೆಗಳು... ಇವೆಲ್ಲವೂ ಭಾರತೀಯನ ಮೇಲೆ ಸಹಜವಾಗೇ ಒಂದು ಆಸೆಯನ್ನ ಹುಟ್ಟಿಸಿದೆ. ಆ ಆಸೆಯ ಪರಿಣಾಮವೇ ಮೋದಿ ಜೀ ಯನ್ನ ಪ್ರಧಾನಿ ಪಟ್ಟದಲ್ಲಿ ನೋಡುವುದು.
ಸಾಮಾನ್ಯವಾಗಿ ಜನ ಯಾವುದನ್ನ ನಂಬುತ್ತಾರೆ... ಕಣ್ಣಿಗೆ ಕಂಡಿದ್ದನ್ನ... ಅದೇ ಇಲ್ಲಿಯೂ ಆಗುತ್ತಿರುವುದು, ಜನರಿಗೆ ಮೋದಿಯ ಆಡಳಿತದ ದೃಷ್ಟಾಂತ ಇದೆ. ಹಲವಾರು ಸಬೆಗಳಲ್ಲಿನ ಮಾತುಗಳಿಂದ ಮೋದಿಜಿಯ ದೂರದೃಷ್ಟಿಯ ಪರಿಚಯವಾಗಿದೆ... ಹಾಗಾಗಿ ಜನರಿಗೆ ಮೋದಿ ಪ್ರಧಾನಿಯಾಗಬೇಕೆಂಬ ಹಂಬಲ. ಆದರೆ ಅಡ್ವಾಣಿಯವರಲ್ಲಿನ ಸಂಘಟಕನ ಪರಿಚಯವಿದೆಯೇ ಹೊರತು ಆಡಳಿತ ವೈಖರಿಯ ಪರಿಚಯ ಇಲ್ಲ. ಹಾಗಾಗಿ ಇಲ್ಲಿ ಅಡ್ವಾಣಿಯವರು ತಿಳಿದುಕೊಳ್ಳಬೇಕು ಜನರ ಭಾವನೆಗೆ ಬೆಲೆಕೊಡುವ ಮನ ಮಾಡಬೇಕು. ಯಾವ ರೀತಿ ಚುನಾವಣೆಯಲ್ಲಿ ಸೋತಾಗ " ಜನರ ಭಾವನೆಗೆ ನಾವು ಬೆಲೆ ಕೊಡುತ್ತೇವೆ " ಅಂತ ಹೇಳುತ್ತಾರೋ.. ಅದೇ ಭಾವನೆಯಾದ " ಮೋದಿ ಪ್ರಧಾನಿ" ಭಾವನೆಗೆ ಬೆಲೆ ಕೊಡಬೇಕಾದದ್ದು ಅವರ ಕರ್ತವ್ಯ. ಸದ್ಯದ ರಾಜಕೀಯ ಪರಿಸ್ಥಿತಿಗಳು ಅವರಿಗೂ ತಿಳಿಯದಿದ್ದುದೇನಲ್ಲ. ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂಬುದು ಬಿಂಬಿಸುವುದು ತನ್ನ ಪಕ್ಷದ ಗೆಲುವಿಗೆ ಎಷ್ಟು ಮುಖ್ಯ ಅಂತನ್ನುವುದು ಅವರಿಗೂ ಗೊತ್ತಿರುವ ಸತ್ಯವೇ...ಆದರೂ ಅದ್ಯಾವ ಆಸೆಯಿಂದ ಈ ರೀತಿಯ ಹೇಳಿಕೆಗಳನ್ನ ಕೊಡುತ್ತಿದ್ದಾರೋ...ದೇವರೇ ಬಲ್ಲ.
ಅದರ್ಶಗಳನ್ನೇ ಉಸಿರಾಗಿ ಜೀವಿಸಿದ ವ್ಯಕ್ತಿಗೆ ತನ್ನ ಕನಸು ನನಸಾಗುವುದು ಮುಖ್ಯವಾಗಬೇಕೇ ಹೊರತು ನನ್ನಿಂದಲೇ ನನಸಾಗಬೇಕು ಅನ್ನುವ ಭಾವ ಇರಬಾರದು. ಅಂತಹ ಭಾವ ಇದೆ ಅಂತಾದಲ್ಲಿ ಅಡ್ವಾಣಿಗೂ ಯಡಿಯೂರಪ್ಪನವರಿಗೂ ಏನು ವ್ಯತ್ಯಾಸವಿದ್ದೀತು...? ( ಇಲ್ಲಿನ ಹೋಲಿಕೆ "ನನ್ನಿಂದಲೇ" ಅನ್ನುವ ವಿಷಯಕ್ಕೆ ಮಾತ್ರ ಸೀಮಿತ ಇನ್ನುಳಿದಂತೆ ಅಲ್ಲ) ಸಮೃದ್ಧ ಭಾರತದ ಕನಸನ್ನ ಮೋದಿಜೀ ಮಾಡಿ ತೋರಿಸುತ್ತಾರೆ ಅನ್ನುವ ನಂಬಿಕೆ ಜನರಿಗಿದೆ. ಆ ಜನರನ್ನ ನಿರಾಸೆಗೆ ಒಳಪಡಿಸುವ ಕಾಯಕವೇಕೆ. ಬಹುಪಾಲು ಜನರ ಆಸೆಗೆ ಬೆಲೆ ಸಿಗಬೇಕಾದದ್ದು ಅನಿವಾರ್ಯತೆ, ಇದಕ್ಕಾಗಿ ಒಬ್ಬಿಬ್ಬರ ಆಸೆಯನ್ನ ಬಲಿಕೊಡಬೇಕಾದದ್ದು ಸಾಮಾನ್ಯ ಸಂಗತಿ. ಅಂತಹಾ ತ್ಯಾಗಕ್ಕೆ ಅಡ್ವಣಿಜೀ ಯವರು ಮನ ಮಾಡಬೇಕು. ಅದಾದಾಗಲೇ ಅವರ ಹಿರಿತನಕ್ಕೆ ಬೆಲೆ ಸಿಗುವುದು. ಹಿರಿಯರ ಮಾರ್ಗದರ್ಶನ ಅನ್ನೋದು ತನ್ನ ಹಿಂದೆಯೇ ಬನ್ನಿ ಎಂದಲ್ಲ ... ಈ ಮಾರ್ಗದಲ್ಲಿ ಸಾಗಿ ಅಂತ ಹೇಳುವುದರಲ್ಲೂ ಇದೆಯಲ್ಲ.
ಆ ನಿಟ್ಟಿನಲ್ಲಿ ಅಡ್ವಾಣಿಜೀ ಯವರಲ್ಲಿ ನನ್ನದೊಂದಿಷ್ಟು ಬಿನ್ನಹ...." ಅಡ್ವಾಣಿಜೀ... ಪಕ್ಷ ಎಂದ ಮೇಲೆ ಒಬ್ಬರ ಏಳಿಗೆಯನ್ನ ಸಹಿಸಿಕೊಳ್ಳಲಾಗದ ಜನರು ಹಲವರಿರುತ್ತಾರೆ. ಅಂತ ಸಂಧರ್ಭದಲ್ಲಿ ಪಕ್ಷದ ಹಿರಿಯರಾಗಿ ನೀವು ಎಲ್ಲರಿಗೂ ಯಾವುದು ಸರಿ.. ಯಾವುದು ತಪ್ಪು... ಅಂತ ತಿಳಿಹೇಳುವ ಕೆಲಸ ಮಾಡಬೇಕು. ಮತ್ತು ಅದು ಸಕಾಲಿಕವಾಗಿರಬೇಕು,ಯಾವಾಗ ತಪ್ಪು ನಡೀತಿದೆ ಅನ್ನೋದು ಗೊತ್ತಾಗುತ್ತೋ ಆವಾಗಲೇ "ಇದು ತಪ್ಪು" ಅಂದು ಬಿಟ್ಟರೆ ತಿದ್ದಿಕೊಳೋದಿಕ್ಕೆ ಸುಲಭ. ಆದರೆ ತಪ್ಪೊಂದು ದೊಡ್ದ ರೋಗವಾಗಿ ಬೆಳೆಯಿತು ಅಂತಾದರೆ ಆಮೇಲೆ ಗುಣಪಡಿಸೋದು ಕಷ್ಟ ಸಾಧ್ಯ. ಇದಕ್ಕೆ ನಿದರ್ಶನ ಎಂಬಂತಿದೆ ಕರ್ನಾಟಕದ ಬಿಜೆಪಿಯ ಪರಿಸ್ಥಿತಿ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ಬೇಕಾಗಿರುವುದೇನು ಅನ್ನೋದನ್ನ ತಾವು ಮನಗಾಣಬೇಕು... ಪಕ್ಷದೊಳಗೆ ನಿಮ್ಮನ್ನ ಅಟ್ಟಕ್ಕೇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಹಲವರಿದ್ದಾರೂ, ಆದರೂ ಒಮ್ಮೆ ಭಾರತದ ಅಸಂಖ್ಯಾತ ಆಸೆ ಕಂಗಳು ಮೋದಿಜಿಯ ಮೇಲೆ ನೆಟ್ಟಿರುವುದನ್ನೊಮ್ಮೆ ನೋಡಿ....ಭಾರತದ ಬಹುಪಾಲು ಮತದಾರರಲ್ಲಿ ಯುವಜನತೆಯ ಪಾತ್ರ ಮಹತ್ತರವಾದದ್ದು. ಅಂತಹ ದೊಡ್ದ ಸಮೂಹವನ್ನ ತಮ್ಮತ್ತ ಆಕರ್ಷಿಸಿಕೊಳ್ಳುವಲ್ಲಿ ಮೋದೀಜೀ ಸಫಲರಾಗಿದ್ದಾರೆ. ರಾಜಕೀಯ ಅಂದರೆ ಕ್ಯಾಕರಿಸಿ ಉಗಿಯಬೇಕು ಅಂತನ್ನುವ ಆಧುನಿಕ ಯುವ ಪೀಳಿಗೆ ಕೂಡ ಮೋದಿಜಿಯವರ ಕುರಿತು ಸಕಾರಾತ್ಮಕವಾಗಿ ಮಾತನಾಡುತ್ತಾರೆ. ಅಂದೊಮ್ಮೆ ಕಾಂಗ್ರೆಸ್ ಪಕ್ಷದ ಯುವ(???) ನೇತಾರನೆಂದೆನಿಕೊಂಡವ ಮೋದಿ ವಿರುದ್ಧ ಮಾತನಾಡಿದ... ಎಂದ ಮಾತ್ರಕ್ಕೆ ಸಭೆಯಲ್ಲೇ ತರಾಟೆಗೆ ತೆಗೆದುಕೊಂದ ವಿದ್ಯಾರ್ಥಿ ಸಮೂಹದ ನೆನಪನ್ನೊಮ್ಮೆ ಮಾಡಿಕೊಳ್ಳಿ.. ಎಲ್ಲೋ ಅವರು ಮೋದೀಜೀ ಯವರನ್ನ ನಮ್ಮ ಕಾಲದ ( ಆಧುನಿಕ ತಂತ್ರಜ್ನಾನದ )ನಾಯಕ ಅಂತಂದುಕೊಂಡಿದ್ದಾರೆ. ಅಂತಹಾ ಅಸಂಖ್ಯಾತ ಜನರಿಗೆ, ಯುವ ಪೀಳಿಗೆಗೆ ನಿರಾಸೆ ಮೂಡಿಸುವುದು ತರವೇ... ಇಲ್ಲವೇ ಒಮ್ಮೆ ನಿಮ್ಮನ್ನ ನೀವೇ ಕೇಳಿಕೊಳ್ಳಿ ನನ್ನಿಂದ ನನ್ನ ಪಕ್ಷಕ್ಕೆ ಬಹುಮತ ತೆಗೆದುಕೊಡಲು ಸಾಧ್ಯವೇ ಅಂತ. ಅಥವಾ ಬಿಜೆಪಿಯ ಬೆನ್ನೆಲುಬಾದ ನಿಷ್ಠಾವಂತ ಕಾರ್ಯಕರ್ತರ ಮನದ ಭಾವನೆಯನ್ನ ತಿಳಿಯುವ ಪ್ರಯತ್ನ ಮಾಡಿ. ಆಮೇಲೆ ನ್ಯಾಯಯುತವಾಗಿ ಪರಾಮರ್ಶಿಸಿ ನೋಡಿ ನಿಮಗೇ ಗೊತ್ತಾಗುತ್ತೆ ಇಲ್ಲಿ ಮೋದಿ ಪ್ರಧಾನಿಯಾಗೋದು ಎಷ್ಟು ಪ್ರಾಮುಖ್ಯ ಅಂತ. ಸಮೃದ್ಧ ಭಾರತದ ಕನಸನ್ನ ಖಂಡಿತವಾಗಿಯೂ ಮೋದಿಜೀ ಸಾಕಾರಗೊಳಿಸುತ್ತಾರೆ ಇದರಲ್ಲಿ ಸಂಶಯವೇ ಇಲ್ಲ, ಆದರೆ ಅವರಿಗೆ ನಿಮ್ಮಂತಹ ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನ ಬೇಕಾಗಿದೆ. ಬರಿಯ ಸ್ವಪ್ರತಿಷ್ಠೆಗಾಗಿ ನಿಮ್ಮನ್ನು ಬೆಂಬಲಿಸಿ ಮೋದಿಜೀಯನ್ನ ವಿರೋದಿಸೋ ಜನ ಪಕ್ಷದಲ್ಲಿ ಇದ್ದಾರು ಅಂತಹವರ ಕಿವಿ ಹಿಂಡಿವ ಕೆಲಸ ಹಿರಿಯರಾಗಿದ್ದು ನೀವು ಮಾಡಬೇಕಾಗಿದೆ. ಆವಾಗಲೇ ನಿಮ್ಮ ಹಿರಿತನಕ್ಕೆ ಗೌರವ ಸಿಗುವುದು. ಪ್ರಧಾನಿಯಾಗೋ ಕನಸು ನೀವು ಕಂಡಿರಬಹುದು ಅದು ತಪ್ಪು ಅಂತಲ್ಲ ಆದರೆ ಇಲ್ಲಿ ಆ ಕನಸಿಗಿಂತಲೂ ಪ್ರಾಮುಖ್ಯವಾದದ್ದು ಸಮಸ್ತ ಭಾರತೀಯರ ಕನಸು.
ಬಹುಷ ಹಿಂದೊಮ್ಮೆ ಇಂತಹಾ ದುರ್ಘಟನೆ ಭಾರತದಲ್ಲಿ ನಡೆದು ಹೋಗಿದೆ ಸರ್ದಾರ್ ವಲ್ಲಭ ಭಾಯಿ ಪಟೇಲರು ಪ್ರಧಾನಿಯಾಗಬೇಕಿತ್ತು ಆದರೆ ಅಸಮರ್ಥ ನೆಹರೂ ಪ್ರಧಾನಿ ಆದರು ( ಅದರೆ ಅಡ್ವಾಣಿ ಜೀ ನೀವು ನೆಹರೂರವರಿಗಿಂತ ತುಂಬಾನೇ ಸಮರ್ಥರು ಇದರಲ್ಲಿ ಎಳ್ಲಷ್ಟೂ ಸಂಶಯವಿಲ್ಲ ಆದರೆ ಮೋದಿ ಅವರೊಂದಿಗೆ ತುಲನೆ ಮಾಡಿದಾಗ ಅವರು ಸ್ವಲ್ಪ ಹೆಚ್ಚೇ ತೂಗುತ್ತಾರೆ) ಅಂತಹ ತಪ್ಪು ಮರುಕಳಿಸುವುದು ಬೇಡ. ಇದಕ್ಕೆ ನೀವೇ ಮನಮಾಡಬೇಕು, ಇಲ್ಲವಾದಲ್ಲಿ ನೀವು ಸಂಪಾದಿಸಿಕೊಂಡ ಘನತೆಯನ್ನ ನೀವು ನಿಮ್ಮ ಕೈಯಾರೆ ಕಳಕೊಳ್ಳಬೇಕಾದೀತು."
ನಿಮ್ಮ ಬಾಯಲ್ಲೇ ಮೋದಿ ನಮ್ಮ ಪ್ರಧಾನಿ ಅಭ್ಯರ್ಥಿ ಅಂತ ಕೇಳಿಸಿಕೊಳ್ಳುವ ಆಸೆಯಲ್ಲಿರುವ....

No comments:

Post a Comment