Saturday 31 October 2015

ಇಂಥಾ " ಗುರಿ ಕಾರರು " ನಮ್ಮ ಪ್ರತಿಯೊಂದು ಜಾತಿಗಳಲ್ಲಿ ಏಕಿಲ್ಲ...?



ಇತ್ತೀಚೆಗೆ ನನ್ನ ಗೆಳೆಯನೊಬ್ಬನ ಮದುವೆಗೆ ಹೋಗಿದ್ದೆ. ನನ್ನ ಊರಿಂದ ತುಂಬಾ ದೂರದಲ್ಲಿದ್ದ ಕಾರಣ ಮದುವೆಯ ಹಾಲ್ ಮುಟ್ಟುವಷ್ಟರಲ್ಲಿ 12.40 ಕಳೆದಿತ್ತು. ನಾವು ಹೋಗಿ ಮುಟ್ಟಿದರೂ ಮುಂಚಿನ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನನ್ನ ಕೆಲವು ಮಿತ್ರರು ಇನ್ನೂ ಕಾಣಿಸುತ್ತಿರಲಿಲ್ಲ. ಸರಿ ಸುಮಾರು 1.00 ಗಂಟೆಯಾಗುವಷ್ಟರಲ್ಲಿ ಬಂದರೆನ್ನಿ, " ಯಾಕಿಷ್ಟು ತಡ " ಅಂದುದಕ್ಕೆ ಒಬ್ಬನ ಉತ್ತರ, ನನ್ನ ಹಲವು ಮಿತ್ರರಿಗೆ ನಗುವನ್ನ ತರಿಸಿತ್ತು.... " ಹನ್ನೆರಡೂವರೆಗೆ ಯಾರೋ ಫೋನ್ ಮಾಡಿದಕ್ಕಾಯ್ತು, ಇಲ್ಲದಿದ್ದರೆ ಎಚ್ಚರವೇ ಆಗುತ್ತಿರಲಿಲ್ಲವೇನೋ " ಅಂದಿದ್ದ. ಅಷ್ಟೊಂದು ನಿದ್ರೆನಾ...? ಅಂತ ನಿಮಗನ್ನಿಸಿರಬಹುದು... ಬರಿಯ ನಿದ್ರೆ ಆಗಿದ್ದರೆ ಎಚ್ಚರವಾಗಿರುತಿತ್ತು... ಆದರೆ ಇದೋ " ಅಮಲಿನ" ನಿದ್ರೆ ಹೇಗೆ ಎಚ್ಚರವಾಗೋದು...? ಹೌದು ಮುನ್ನಾದಿನದ ಮೆಹಂದಿ ಕಾರ್ಯಕ್ರಮದಲ್ಲಿ ಕಂಠಪೂರ್ತಿ ಕುಡಿದ ಹೆಚ್ಚಿನವರಿಗೆ ಸೂರ್ಯ ನೆತ್ತಿ ಮೇಲೆ ಬಂದ ನಂತರವೂ ಎಚ್ಚರವಾಗಿರಲಿಲ್ಲವಂತೆ ( ಎಲ್ಲರಿಗೂ ಅಲ್ಲ...ಕೆಲವರಿಗೆ ಕೆಪಾಸಿಟಿ ಸ್ವಲ್ಪ ಜಾಸ್ತಿ ಇರುತ್ತೆ ). ನಾವೇನೋ ಇದನ್ನ ತಮಾಷೆಯಾಗಿ ಸ್ವೀಕರಿಸಿಬಿಡುತ್ತೇವೆ. ಆದರೆ ಇದೊಂದು ಬಹಳ ಕಳವಳಕಾರಿ ವಿಷಯ. ಯಾಕೆಂದರೆ ಇತ್ತೀಚೆಗೆ ನಾನು ಗಮನಿಸಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ " ಮೆಹಂದಿ ಪಾರ್ಟಿ "ಯ ಮಹತ್ವ ಅತಿಯಾಗ್ತಾ ಇದೆ.
ಏನಿದು " ಮೆಹಂದಿ " ? ಮದುವೆಯ ಮುನ್ನಾದಿನ ವಧೂ ವರರ ಕೈಗೆ ಮೆಹಂದಿ ಹಚ್ಚುವ ಸಣ್ಣ ಸಮಾರಂಭವನ್ನ ನಮ್ಮಲ್ಲಿ ಮೆಹಂದಿ ಅನ್ನುತ್ತೇವೆ. ಸರ್ವೇ ಸಾಮಾನ್ಯವಾಗಿ ಗೊತ್ತಿರುವ ವಿಚಾರವೇ... ನನಗೆ ಗೊತ್ತಿದ್ದ ಮಟ್ಟಿಗೆ ಹಿಂದೂ ಸಮಾಜದ ಹೆಚ್ಚಿನ ಎಲ್ಲಾ ಜಾತಿಗಳಲ್ಲಿ ಈ ಆಚರಣೆ ಇದೆ. ಈ ಆಚರಣೆಯು ಮನೆಮಂದಿಗಳೇ ಆಚರಿಸಿಕೊಂಡಿರುವ ಆಚರಣೆಯೇ ವಿನಹ ಶಾಸ್ತ್ರೀಯವಾಗಿ ಇದಕ್ಕೆ ಅಂತಹ ಮಹತ್ವ ಏನಿಲ್ಲ , ಅಂದರೆ ಹಿಂದೂ ಸಮಾಜದಲ್ಲಿ ಹೇಳಲ್ಪಟ್ಟಿರುವ ಷೋಡಶ ಸಂಸ್ಕಾರಗಳಲ್ಲಿ ಇದು ಸ್ಥಾನವನ್ನ ಪಡೆದಿಲ್ಲ. ಅಂದರೆ ಹಿಂದೆಲ್ಲ ಮದುವೆಯ ಮನೆಯ ಆಪ್ತರಷ್ಟೇ ಬಂದು ನಡೆಸುವ ಕಾರ್ಯಕ್ರಮ. ಇಲ್ಲಿ ಯಾವುದೇ ಪುರೋಹಿತರ ಆವಶ್ಯಕತೆ ಇಲ್ಲ. ಇಂಥಾ ಒಂದು ಸಣ್ಣ ಆಚರಣೆ ಇಂದು ಮದುವೆಗಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಕೊಳ್ಳುತ್ತಿರುವುದೇ ನನ್ನ ಆತಂಕಕ್ಕೆ ಕಾರಣ. ಯಾಕೀ ಜನಪ್ರಿಯತೆ.... ಕಾರಣ " ಮದ್ಯ". ಮದ್ಯವಿಲ್ಲದ ಮೆಹಂದಿ ಪಾರ್ಟಿಗಳೇ ಇರೋದಿಲ್ಲ.
ಈ ಮೆಹಂದಿ ಸಮಾರಂಭಗಳಲ್ಲಿ " ಮದ್ಯ"ಕ್ಕೆ ಆತಿಥ್ಯ ಯಾರು ಕೊಟ್ಟರೋ ದೇವರೇ ಬಲ್ಲ, ಆದರೆ ಇತ್ತೀಚೆಗೆ ಮದುವೆಯಷ್ಟೇ ಖರ್ಚು ಅಥವಾ ಅದಕ್ಕಿಂತಲೂ ಜಾಸ್ತಿ ಈ ಮೆಹಂದಿಯ ಖರ್ಚಿದೆ ಅಂದರೆ ಸುಳ್ಳಾಗಲಿಕ್ಕಿಲ್ಲ. ಬರಿಯ ಕುಟುಂಬಿಕರು ಮತ್ತು ಆಪ್ತ ಸಂಬಂಧಿಗಳಷ್ಟೇ ಇರುವಂಥಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕುಡುಕ ಮಿತ್ರರ ಬಳಗವೂ ಸೇರಿಕೊಂಡು ಬಿಟ್ಟಿದೆ. ಕೆಲವೆಡೆ ಜೋರಾದ " DJ " ಗಳ ಅಬ್ಬರವಿರುತ್ತೆ, ಇನ್ನು ಕೆಲವೆಡೆ ಮನರಂಜನಾ ಕಾರ್ಯಕ್ರಮಗಳನ್ನೇರ್ಪಡಿಸುತ್ತಾರೆ, ಮಾಂಸಾಹಾರದ ಊಟ ಇರುತ್ತೆ, ಒಟ್ಟಿನಲ್ಲಿ ಕುಡಿಯೋರಿಗಂತು ಹಬ್ಬದ ವಾತಾವರಣ. ತಡರಾತ್ರಿವರೆಗೂ ಕುಣಿಯುತ್ತಲೇ ಇರುತ್ತಾರೆ, ಕುಡಿಯುತ್ತಲೇ ಇರುತ್ತಾರೆ. ಮನೆಯವರು ನೋಡುತ್ತಾರೆ, ಹೆಣ್ಣು ಮಕ್ಕಳು ನೋಡುತ್ತಾರೆ ಅನ್ನೋ ಪರಿವೆಯೇ ಇಲ್ಲದೆ ಮದ್ಯದಮಲಿನಲ್ಲಿ ತೇಲಾಡತೊಡಗುತ್ತಾರೆ... ವಿಚಿತ್ರ ಎಂಬಂತೆ ಸಂಬಂಧಿಕರು, ಹಿರಿಯರು , ಕಿರಿಯರೂ ಈ ಕುಡಿಯುವಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ರೀತಿಯಲ್ಲಿ ಕುಡಿತದ ಫ್ಯಾಮಿಲಿ ಪ್ರಮೋಶನ್ ಇದ್ದ ಹಾಗೆ. ಎಂತಹಾ ದುರಂತ ಅಲ್ವಾ ಸಂಪ್ರದಾಯದ ಹೆಸರಿನಲ್ಲಿ ಕುಡಿತವನ್ನ ವೈಭವೀಕರಿಸೋದು....? ನಮ್ಮ ಮುಂದಿನ ಪೀಳಿಗೆಗೆ ನಾವು ಇದನ್ನೇ ಬಳುವಳಿಯಾಗಿ ಕೊಡೋದಾ...
ಇಂಥಾ ಆಚರಣೆಗಳು ಈ ದುಶ್ಚಟಗಳಿಗೆ ಒಳಗಾಗುವ ಎಳೆಯ ಪ್ರಾಯದವರಿಗೆ ಮತ್ತಷ್ಟು ಹುಮ್ಮಸ್ಸನ್ನು ಕೊಡುತ್ತದೆ, ಕಾರಣ ತಂದೆಯೇ ಕುಡಿಯುತ್ತಿದ್ದರೆ ಮಗನಿಗೂ ಕುಡಿಯೋ ಧೈರ್ಯ ಬರೋದು ಸಹಜ ತಾನೆ. ಅಥವಾ ಕುಡಿಕ ತಂದೆ ಮಗನನ್ನು ಕುಡಿಯಬೇಡ ಅನ್ನೋದಿಕ್ಕೆ ಹೇಗೆ ಸಾಧ್ಯ...? ಒಮ್ಮೆ ಕುಡಿತದ ರುಚಿ ಕಂಡವ ಮತ್ತೆ ಮತ್ತೆ ಅದರ ಬಳಿ ಹೋಗಿಯೇ ಹೋಗುತ್ತಾನೆ. ಹೀಗಾಗಿ ಒಂದು ಸಂಪ್ರದಾಯ ಸಮಾಜಕ್ಕೆ ಕೂಡುಕನೊಬ್ಬನನ್ನ ಕೊಡುಗೆಯಾಗಿಸುತ್ತದೆ. ಕೆಲವರು ಹೇಳಿಯಾರು " ನಾನೇನೂ ಯಾವತ್ತೂ ಕುಡಿಯೋದಿಲ್ಲ , ಇಂಥಾ ಸಂಧರ್ಭಗಳಲ್ಲಿ ಮಾತ್ರ ಕುಡಿಯೋದು" ಅಂತ. ಆದ್ರೆ ಅವರಿಗೆ ಅರಿವಿಲ್ಲದಂತೆ ಆವರ ಮನಸ್ಸು ಅವಕಾಶಗಳನ್ನ ಹುಡುಕಲು ಶುರು ಮಾಡುತ್ತೆ . ಮುಂದೊಂದು ದಿನ ಅದರ ದಾಸರಾಗಲೂ ಬಹುದು. ಹಾಗಾದ ಪಕ್ಷದಲ್ಲಿ ಪೋಷಕರೇ ತಮ್ಮ ಮಕ್ಕಳನ್ನ ಹಾಳು ದಾರಿಗೆ ನೂಕಿದಂತಾಗುತ್ತದಲ್ಲವೇ... ಮದುವೆಯ ಸಮಾರಂಭಗಳಲ್ಲಿ ಮನೋರಂಜನೆಯ ಅಗತ್ಯವಿದೆ ಒಪ್ಪಿಕೊಳ್ಳೋಣ, ಹಾಗಂತ ಕುಡಿತವೇ ಮನರಂಜನೆಯೇ... ನಾವು ಸ್ವಲ್ಪ ಆಲೋಚಿಸಬೇಕಾಗಿದೆಯಲ್ವಾ...
ಇಷ್ಟು ಓದಿದ ನಿಮಗೆ ಈ ಬರಹಕ್ಕೂ ಶೀರ್ಷಿಕೆಗೂ ಏನಪ್ಪಾ ಸಂಬಂಧ ಅಂತ ಅನ್ನಿಸಿರಬೇಕು ಅಲ್ವಾ.... ಈ ಲೇಖನ ಬರೆಯೋದಿಕ್ಕೆ ಕಾರಣ ನಿನ್ನೆ ಪತ್ರಿಕೆಯಲ್ಲಿನ ಒಂದು ಸುದ್ದಿ... ಸುದ್ದಿ ಏನಪ್ಪಾ... ಅಂದ್ರೆ ನಮ್ಮ ಕಡಲತೀರದ ಮೊಗವೀರ ಸಮಾಜದ ಕೆಲವೊಂದು ಕೂಡುವಳಿಕೆಯಲ್ಲಿ ( ದಕ್ಷಿಣ ಕನ್ನಡ ಜಿಲ್ಲೆಯ ಊರುಗಳಾದ ಸಸಿಹಿತ್ಲು, ಮುಕ್ಕ, ಹೊಸಬೆಟ್ಟು, ತಣ್ನೀರುಬಾವಿ, ಪಣಂಬೂರು... ಇತ್ಯಾದಿ ಭಾಗಗಳಲ್ಲಿ ) ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೆಹಂದಿ, ಸೀಮಂತ ಇತ್ಯಾದಿ ಕಾರ್ಯಕ್ರಮಗಳಲ್ಲಿ ಮೇಲೆ ಹೇಳಿರುವಂಥಾ ಮದ್ಯದ ಪಾರ್ಟಿ ಇಟ್ಟುಕೊಳ್ಳುವಂತಿಲ್ಲ. ಇಟ್ಟವರಿಗೆ 25000 ರೂ ದಂಡ ಹಾಕಲಾಗುತ್ತದೆ. ಈ ನಿರ್ಣಯ ಕೈಗೊಂಡವರು ಆ ಸಮಾಜದ ಮುಖ್ಯಸ್ಥರಾಗಿರುವಂಥಾ " ಗುರಿಕಾರ" ಎಂಬುವವರು. ಈ ರೀತಿಯ ನಿರ್ಧಾರಕ್ಕೆ ಕಾರಣ... ಪಾನಮತ್ತರಾದ ವ್ಯಕ್ತಿಗಳಿಂದ ಉಂಟಾಗುತಿದ್ದ ಅನಾಹುತಗಳು. ಅದೆಷ್ಟೇ ಆತ್ಮೀಯ ಮಿತ್ರರಾಗಿರಲಿ ಈ ಗುಂಡು ಒಳಹೊಕ್ಕ ಮೇಲೆ ಆತ , ಆತನಾಗಿರುವುದಿಲ್ಲ . ಒಳಗಿರುವ ಗುಂಡು ಅವನಿಂದ ಮಾಡಬಾರದಂತದನ್ನೆಲ್ಲಾ ಮಾಡಿಸುತ್ತೆ. ಇಂಥಾ ಸಂದರ್ಭದಲ್ಲಿ ಅನಾಹುತಗಳು ಆಗೋದು ಸಹಜ.ನಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸೋದು, ಕುಡಿತದ ವಿಷಯವಾಗಿ ಜಗಳ ಮಾಡೋದು ಈ ರೀತಿ ಹಲವಾರು ಕೆಟ್ಟ ಘಟನೆಗಳು ನಡೆಯೋ ಸಾಧ್ಯತೆಗಳಿವೆ. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಈ ರೀತೀಯ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದಾಗ ಮನಸ್ಸಿಗೆ ಬಹಳಾನೆ ಸಂತೋಷವಾಗಿತ್ತು. ನಿರ್ಣಯದ ಹಿಂದಿರುವ ಕಾರಣ ಏನೇ ಇರಲಿ ಆದರೆ ಸಂಪ್ರದಾಯದ ಹೆಸರಿನಲ್ಲಿ ಮದ್ಯ ಬಿಕರಿಯಾಗೋದು ತಪ್ಪುತ್ತಲ್ಲ. ಅನ್ಯ ಸಮಾಜದವರು ಕೂಡ ನಮ್ಮ ಸಂಪ್ರದಾಯಗಳನ್ನು ಕಂಡು ಅಪಹಾಸ್ಯ ಮಾಡೋದು ತಪ್ಪುತ್ತಲ್ಲ. ಹಾಗಾಗಿ ಹೇಳಿದ್ದು " ಇಂಥಾ ಗುರಿಕಾರರು ಪ್ರತಿಯೊಂದು ಜಾತಿಯಲ್ಲೂ ಯಾಕಿಲ್ಲ...? " ಅಂತ. ಆ ಸಮಾಜದ ಪ್ರಮುಖರು ಮನಗಂಡ ಈ ಸೂಕ್ಷ್ಮ ವಿಷಯವನ್ನ ಇನ್ನುಳಿದ ಜಾತಿಯ ಮುಖಂಡರು ಅದ್ಯಾವಾಗ ಮನಗಾಣುತ್ತರೋ... ಹಿಂದೂ ಸಮಾಜದ ಪ್ರತಿಯೊಂದು ಜಾತಿಯವರಲ್ಲೂ ಈ ಯೋಚನೆ ಮೂಡಿದಾಗ ನಮ್ಮೊಳಗಿನ ಹಲವು ಅನಾಹುತಗಳನ್ನ ತಪ್ಪಿಸಲು ಸಾಧ್ಯ... ಇನ್ನುಳಿದ ಜಾತಿಯವರೂ ಇವರನ್ನ ಅನುಕರಿಸಲಿ ಅನ್ನೋದೆ ನನ್ನ ಆಸೆ. ಹೀಗಾದಾಗ ಮಾತ್ರ.... ನಮ್ಮ ಸಂಸ್ಕೃತಿಯ ಗೌರವ ಉಳಿಯುತ್ತೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಇದೇ ನಮ್ಮ ಸಂಪ್ರದಾಯ ಅನ್ನುವ ತಪ್ಪು ನಂಬಿಕೆಯನ್ನ ಬೆಳಿಸಿಕೊಳ್ಳುವ ಸಾಧ್ಯತೆ ಇದೆ ಅಲ್ವಾ.....

No comments:

Post a Comment