Saturday 31 October 2015

ಯುಗಾದಿಯ ಬಗೆಗೊಂದು ವೈಜ್ಞಾನಿಕ ವಿಶ್ಲೇಷಣೆ.....



ನನ್ನೆಲ್ಲಾ ಮಿತ್ರರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕೆಲವೊಂದು ಯುವ ಮಿತ್ರರಿಗೆ ಇದೇನಿದು ಹೊಸ ವರ್ಷ ಅಂತಿದಾನೆ ಅಂತ ಅನ್ನಿಸಬಹುದು, ಕಾರಣ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಅದೆಷ್ಟರ ಮಟ್ಟಿಗೆ ನಮ್ಮ ಮೇಲಿದೆ ಅಂದರೆ ನಾವು ನಮ್ಮತನವನ್ನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ ಅಂದರೆ ತಪ್ಪಾಗಲಿಕ್ಕಿಲ್ಲ. ಹೊಸ ವರ್ಷ ಅಂತಂದರೆ ಅದು ಜನವರಿ 1 ಕ್ಕೆ ಅನ್ನೋದು ನಮ್ಮ ಮನಸ್ಸಿನಲ್ಲಿ ಬೇರೂರಿಯಾಗಿದೆ. ಆದರೆ ಯಾವತ್ತಾದರೂ ಯಾಕೆ ಭಾರತೀಯರು ಯುಗಾದಿಯಂದು ಹೊಸ ವರ್ಷ ಆಚರಿಸುತ್ತರೆ ಅನ್ನೋದನ್ನ ವಿಮರ್ಶೆ ಮಾಡಿಕೊಂಡಿದ್ದೀರಾ....? ಜಗತ್ತು ಹಿಂದೂ ಧರ್ಮದ ಆಚರಣೆಗಳಿಗೆ ಗೊಡ್ಡು ಸಂಪ್ರದಾಯಗಳ ಅಥವಾ ಮೂಢನಂಬಿಕೆಗಳ ಧರ್ಮ ಅನ್ನೋ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ನಾವುಗಳು ಕೂಡ ಆಚರಣೆಗಳ ವೈಜ್ನಾನಿಕ ಹಿನ್ನಲೆಯನ್ನು ಅರ್ಥ ಮಾಡಿಕೊಳ್ಳದೇ ಇತರರ ಮಾತಿಗೆ ತಲೆದೂಗುತ್ತೇವೆ. ಎಂಥಾ ವಿಪರ್ಯಾಸ.... ನಿಜಕ್ಕೂ ವೈಜ್ನಾನಿಕವಾಗಿ ರೂಪಿಸಿರುವ ಆಚರಣೆಗಳು ಬರಿಯ ಹಿಂದೂ ಧರ್ಮದಲ್ಲಷ್ಟೇ ಕಾಣಲು ಸಾಧ್ಯ.
ಉದಾಹರಣೆಯಾಗಿ ಹೊಸ ವರ್ಷವನ್ನೇ ತೆಗೆದುಕೊಳ್ಳಿ ಜನವರಿ 1 ರಂದು ಹೊಸ ವರ್ಷ ಆಚರಿಸುವವರಲ್ಲಿ ನನ್ನದೊಂದು ಪ್ರಶ್ನೆ... ಯಾಕೆ ಜನವರಿ ಒಂದರಂದು ಹೊಸವರ್ಷ ಆಚರಿಸುತ್ತೀರಾ ಅದಕ್ಕಿರುವ ವೈಜ್ನಾನಿಕ ಹಿನ್ನಲೆ ಏನು...? ಬಹುಶಃ ಯಾರೂ ಉತ್ತರಿಸಲಾರರು... ಅದೇ ಪ್ರಶ್ನೆಯನ್ನು ಒಂದು ವೇಳೆ ಅವರು ನನ್ನಲ್ಲಿ ಕೇಳಿದರೆ... ಖಂಡಿತಾ ನಾನು ವೈಜ್ನಾನಿಕ ಉತ್ತರ ಕೊಡಬಲ್ಲೆ...ನಾವು ಯುಗಾದಿಯನ್ನು ಚೈತ್ರ ಮಾಸದಂದು ಆಚರಿಸುತ್ತೇವೆ. ಇಲ್ಲಿ ಯಾವ ಮಾಸದಲ್ಲಿ ಆಚರಿಸೋದು ಅನ್ನೋದಕ್ಕಿಂತ ಮಹತ್ವಪೂರ್ಣವಾದದ್ದು ಯಾವ ಋತುವಿನಲ್ಲಿ ಆಚರಿಸುತ್ತೇವೆ ಅನ್ನೋದು... ಚೈತ್ರ ಮಾಸ ಬರುವುದು ವಸಂತ ಋತುವಿನಲ್ಲಿ... ಶಿಶಿರ ಋತು ಅಂದರೆ ಚಳಿಗಾಲ ಮುಗಿದು ವಸಂತ ಋತು ಆರಂಭವಾಗೋದು ಈ ಚೈತ್ರ ಮಾಸದಿಂದ... ವಸಂತ ಋತು ಅಂದರೆ ಬೇಸಿಗೆ ಕಾಲ.ಈಗೊಮ್ಮೆ... ಹಾಗೇ ಪ್ರಕೃತಿಯತ್ತ ದೃಷ್ಟಿ ಹಾಯಿಸಿ... ನಿಮಗೆ ಎಲ್ಲಾ ಕಡೆ ಹೊಸ ಚಿಗುರು ಮೂಡುತ್ತಿರುವ... ಹೂವು ಬಿಡುತ್ತಿರುವ ಸಸ್ಯ ಸಂಕುಲ ಕಾಣಿಸುತ್ತದೆ. ಚಳಿಗಾಲದಲ್ಲಿ ತನ್ನ ಎಲೆಗಳನ್ನು ಉದುರಿಸಿಕೊಂಡಿದ್ದ ಗಿಡ ಮರಗಳು ಮತ್ತೆ ಚಿಗುರಿಕೊಳ್ಳಲು ಹವಣಿಸುತ್ತದೆ. ಇದು ಹೊಸತನದೆಡೆಗಿನ ನಡೆ, ಪ್ರಕೃತಿಯೇ ಹೊಸತನಕ್ಕೆ ತುಡಿಯುವ ಕಾಲವನ್ನ ಹೊಸ ವರ್ಷ ಅಂತ ಆಚರಿಸೋಕೆ ಭಾರತೀಯರು ಮನಮಾಡಿದರು. ಇದು ಅವರಲ್ಲಿರುವ ಪ್ರಕೃತಿ ಪ್ರೇಮವನ್ನೂ ಸೂಚಿಸುತ್ತದೆ.
ಈ ರೀತಿಯ ಬದಲಾವಣೆ ಬರಿಯ ಗಿಡ ಮರಗಳಲ್ಲಿ ಮಾತ್ರವಲ್ಲ ಮನುಷ್ಯನಲ್ಲೂ ಕಾಣಿಸುತ್ತದೆ. ನೀವು ಗಮನಿಸಿರಬಹುದು ಚಳಿಗಾಲದಲ್ಲಿ ನಮ್ಮ ಶರೀರದ ಚರ್ಮವು ಸಣ್ಣ ಸಣ್ಣ ಹೊಟ್ಟುಗಳಾಗಿ ಉದುರುತ್ತಿರುತ್ತದೆ. ಇದು ಚಳಿಗಾಲದಲ್ಲಿನ ಮಾನವನ ದೇಹದಲ್ಲಾಗುವ ಬದಲಾವಣೆ. ಅದೇ ವಸಂತ ಋತು ಬರುತ್ತಿದ್ದಂತೆ ಪ್ರಕೃತಿಯಂತೆಯೇ ನಮ್ಮಲ್ಲೂ ಹೊಸ ಚರ್ಮ ಬೆಳೆಯೋಕೆ ಪ್ರಾರಂಭವಾಗುತ್ತದೆ. ಹೊಸಚೈತನ್ಯ ಮೂಡಲಾರಂಭಿಸುತ್ತದೆ. ಅಂದರೆ ಮಾನವ , ಪ್ರಾಣಿ ಸಂಕುಲ , ಸಸ್ಯ ಸಂಕುಲ ಎಲ್ಲಾ ಹೊಸತನದೆಡೆಗೆ ಹೆಜ್ಜೆ ಹಾಕೋದು ಈ ವಸಂತ ಋತುವಿನ ಚೈತ್ರಮಾಸದಿಂದ... ಹಾಗಾಗಿ ಇದನ್ನ ಹೊಸವರ್ಷ ಅಂತ ಆಚರಿಸೋಕೆ ಶುರುಮಾಡಿದರು. ಈ ರೀತಿಯ ಬದಲಾವಣೆಗಳು ಜನವರಿ ಒಂದರಂದು ಕಾಣಸಿಗುತ್ತದೆಯೇ....?
ಇನ್ನು ಆಚರಿಸುವ ರೀತಿಯನ್ನು ಅವಲೋಕಿಸೋಣ...ಜನವರಿ ಒಂದರಂದು ಯಾವ ರೀತಿ ಆಚರಿಸುತ್ತೇವೆ...? ಡಿಸೆಂಬರ್ 31 ರ ರಾತ್ರಿ ಕುಡಿಯೋದಿಕ್ಕೆ ಶುರುಮಾಡಿ ಅಪರಾತ್ರಿ ಹನ್ನೆರಡು ಘಂಟೆಗೆ ಶುಭಹಾರೈಸಿಕೊಂಡರೆ ಮುಗಿಯಿತು. ಅದೆಷ್ಟೋ ದುರ್ಘಟನೆಗಳು ನಡೆಯುತ್ತದೆ. ಹೊಸವರ್ಷಕ್ಕೆ ಕಾಲಿಡೋದು ಎಲ್ಲರೂ ನಶೆಯಲ್ಲಿಯೇ...ಇದೆಂಥಾ ದೌರ್ಭಾಗ್ಯ... ಆದರೂ ನಾವು ಪಾಶ್ಚಿಮಾತ್ಯರ ಕ್ರಮವನ್ನ ವೈಜ್ಞಾನಿಕ ತಳಹದಿ ಇರುವಂತದ್ದು ಅಂತ ಕಣ್ಣು ಮುಚ್ಚಿ ನಂಬುತ್ತೇವೆ. ಎಂಥಾ ವಿಚಿತ್ರ ಅಲ್ವಾ... ಅದೇ ಯುಗಾದಿಯ ಆಚರಣೆ ಹೇಗಿದೆ ಸೂರ್ಯೋದಯಕ್ಕೆ ಎದ್ದು ಸ್ನಾನಾದಿಗಳನ್ನ ಮುಗಿಸಿ ದೇವರ ಪೂಜಾದಿಗಳನ್ನ ಮಾಡಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತೇವೆ. ಬೇವು ಬೆಲ್ಲ ಹಂಚುತ್ತೇವೆ. ಯಾಕೆ ಬೇವು ಬೆಲ್ಲ ಹಂಚೋದು....? ಮತ್ತೊಂದು ಪ್ರಶ್ನಾರ್ಥಕ ಚಿಹ್ನೆ.... ಕೆಲವರು ವೈಜ್ನಾನಿಕ ಸತ್ಯ ಗೊತ್ತಿರದವರು ಅದು ಸುಖ ಮತ್ತು ಕಷ್ಟಗಳ ಪ್ರತೀಕ .... ಎರಡೂ ಸಮನಾಗಿರಲಿ ಅಂತ ಕೊಡುತ್ತಾರೆ ಅನ್ನುತ್ತಾರೆ. ಇರಲಿ ಸುಖ ಕಷ್ಟಗಳ ಪ್ರತೀಕ ಅನ್ನೋದನ್ನ ಒಪ್ಪಿದರೂ... ಅದರ ನಿಜವಾದ ಕಾರಣ ಬೇರೆಯೇ ಇದೆ. ಅದು ನಮ್ಮ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಲ್ಪಟ್ಟ ಆಚರಣೆ.
ಚೈತ್ರ ಮಾಸದಿಂದ ಸೆಕೆಗಾಲದ ಆರಂಭವಾಗುತ್ತದೆ. ಸೂರ್ಯನ ತಾಪ ದಿನೇದಿನೇ ಹೆಚ್ಚುತ್ತಾ ಹೋಗುತ್ತದೆ. ಈ ಕಾಲದಲ್ಲಿ ನೀವು ಗಮನಿಸಿರಬಹುದು ಹೆಚ್ಚಾಗಿ ಜನರಲ್ಲಿ ಉಷ್ಣ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಸಿಡುಬು ರೋಗ, ಪಿತ್ತಕೋಶ ಸಂಬಂಧಿತ ಖಾಯಿಲೆಗಳು... ಈಗ ಹೇಳಿ ಬೇವಿನ ಬಳಕೆಯನ್ನು ಆಚರಣೆಯಲ್ಲಿ ತುರುಕಿಸಿದ್ದು ಯಾಕೆ ....? ಬೇವು ಸಿಡುಬು ರೋಗಕ್ಕೆ ರಾಮಬಾಣ.... ನಮ್ಮ ಹಿರಿಯರು ಮುಂಜಾಗೃತಾ ಕ್ರಮವಾಗಿ ಬೇವಿನ ಬಳಕೆಯನ್ನು ಆಚರಣೆಯ ಭಾಗವಾಗಿಸಿದರು . ಇನ್ನು ಬೇವಿನ ಕಹಿ ಪಿತ್ತಕೋಶದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ಬೇಸಿಗೆಯಲ್ಲಿ ಪಿತ್ತಕೋಶ ತನ್ನ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಳ್ಳುತ್ತದೆ.ಇದನ್ನು ತಡೆಗಟ್ಟಿ ಪಿತ್ತಕೋಶವನ್ನು ಸುಸ್ಥಿತಿಯಲ್ಲಿಡಲು ಬೇವಿನ ಬಳಕೆಯನ್ನು ಆಚರಣೆ ಅಂಗವಾಗಿಸಿದ್ದಾರೆ.
ಈ ಬೇವನ್ನೂ ಕೂಡ ಹಾಗೆ ತಿನ್ನುವುದಲ್ಲ ಬೆಲ್ಲದ ಜೊತೆ ತಿನ್ನಬೇಕು. ಬೆಲ್ಲ ಪಿತ್ತಕಾರಕ, ಅದರಂತೆಯೇ ಬೇವೂ ಕೂಡ ಪಿತ್ತಕಾರಕ ಆದರೆ ಬೇವು ಬೆಲ್ಲ ಎರಡನ್ನೂ ಸಮನಾಗಿ ಸೇವಿಸಿದಾಗ ಬೆಲ್ಲದ ಪಿತ್ತ ಬೇವಿನ ಪಿತ್ತವನ್ನು ತೊಡೆದುಹಾಕುತ್ತದೆ. ಅಂದರೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆದಂತೆ. ಮತ್ತು ಬೆಲ್ಲದಲ್ಲಿ ಸಿಹಿಯ ಜೊತೆ ಹಲವು ಔಷಧೀಯ ಗುಣಗಳಿವೆ. ಇದು ನಮ್ಮ ಅರೋಗ್ಯಕ್ಕೆ ಅತ್ಯುತ್ತಮ. ಹೀಗೆ ಕಾಲ ಕಾಲಕ್ಕೆ ಬರುವ ರೋಗಗಳಿಗೆ ಮುಂಜಾಗೃತವಾಗಿ ಸಿದ್ಧರಾಗಿ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವಂತೆ ನಮ್ಮ ಆಚರಣೆಗಳನ್ನು ರೂಪಿಸಿದ್ದರೆ ಇನ್ನೊಂದೆಡೆ ಕುಡಿತವನ್ನು ಪ್ರಚೋದಿಸುವ ಪದ್ಧತಿ ಇದೆ...ಎಂಥಾ ಅಜಗಜಾಂತರ ವ್ಯತ್ಯಾಸ ಅಲ್ವಾ....ಆದರೂ ನಮಗೆ ನಮ್ಮ ಆಚರಣೆಗಳ ಶ್ರೇಷ್ಠತೆಯ ಅರಿವಿಲ್ಲ, ಇದು ವಿಪರ್ಯಾಸವೇ ಸರಿ....
ವಿಜ್ಞಾನ ವಿಜ್ಞಾನ  ಅಂತ ಬೊಬ್ಬಿಡುವವರಿಗೆಲ್ಲ ಒಂದು ಸಣ್ಣ ಕಿವಿಮಾತು ನಮ್ಮ ಆಚರಣೆಯ ಹಿಂದಿರುವ ಸತ್ಯದ ಅನ್ವೇಷಣೆ ಮಾಡಿ. ಇನ್ನುಮುಂದಾದರೂ ಹೀಯಾಳಿಸುವ ಮುನ್ನ ಅದರೊಳಗಿನ ಸತ್ಯವನ್ನು ಹುಡುಕುವ ಪ್ರಯತ್ನ ಮಾಡಿ ಆಮೇಲೆ ಯಾವುದು ಒಳ್ಳೆಯದು..? ಯಾವುದು ಕೆಟ್ಟದು..? ಅನ್ನೋದನ್ನ ನಿರ್ಧರಿಸಿ. ಪಶ್ಚಿಮದ್ದು ಅಂತಾದ ಕೂಡಲೇ ಎಲ್ಲವೂ ವೈಜ್ಞಾನಿಕವಲ್ಲ, ನಮ್ಮದು ಅಂತಂದರೆ ಅದು ಮೂಢ ನಂಬಿಕೆಗಳಲ್ಲ. ಅದೆಷ್ಟೋ ಜ್ಞಾನಿಗಳ ತಪಸ್ಸಿನ ಫಲವಾಗಿ ರೂಪಿತವಾಗಿರುವ ಆಚರಣೆಗಳಿದು. ಆಚರಿಸುವ ಮನಸ್ಸಿಲ್ಲಾವಾದರೆ ಬಿಟ್ಟು ಬಿಡಿ ಆದರೆ ಮೂದಲಿಕೆ ಮತ್ತು ಅಪಪ್ರಚಾರ ಒಳ್ಳೆಯದಲ್ಲ.. ಅಲ್ವಾ....
ನನ್ನೆಲ್ಲಾ ಮಿತ್ರರಿಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು... ಈ ವಿಜಯ ನಾಮ ಸಂವತ್ಸರ ಎಲ್ಲರ ಜೀವನದಲ್ಲಿ ಯಶಸ್ಸನ್ನು ತರಲಿ....
ಅಂದ ಹಾಗೆ ಬೇವು ಬೆಲ್ಲ ತಿನ್ನೋವಾಗ ಈ ಶ್ಲೋಕವನ್ನ ಹೇಳೋದಿಕ್ಕೆ ಮರೀಬೇಡಿ...
ಶತಾಯುರ್ವಜ್ರದೇಹಾಯಾ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
( ಶರೀರವು ವಜ್ರದಂತೆ ಆಗುತ್ತದೆ. ಸರ್ವಸಂಪತ್ತು ಉಂಟಾಗುತ್ತದೆ. ಸರ್ವ ಅರಿಷ್ಟಗಳು ನಾಶವಾಗುತ್ತದೆ)

No comments:

Post a Comment