Sunday 25 October 2015

ಮೈ ಅಜಾದ್ ಹೂಂ ಅಜಾದ್ ಹೀ ರಹೂಂಗಾ.... ಭಾಗ 6



ತನ್ನ ನಂಬಿಗಸ್ಥ ಪಡೆಯಲ್ಲಿನ ಸದಸ್ಯರು ಒಬ್ಬೊಬ್ಬರಾಗಿ ದೂರ ಸರಿದಂತೆ ಅಜಾದ್ ಒಬ್ಬಂಟಿಯಾಗತೊಡಗಿದ್ದರು ... ಒಂದಷ್ಟು ಜನ ಸೆರೆವಾಸದಲ್ಲಿದ್ದರೆ ಇನ್ನೊಂದಷ್ಟು ಜನ ಭಾರತ ಮಾತೆಯ ಚರಣಗಳಿಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು ...ತನ್ನ ಗೆಳೆಯರನ್ನು ಕಳೆದುಕೊಂಡಾಗ ಆಗುತ್ತಿದ್ದ ಬೇಸರ ಅವರನ್ನು ತಮ್ಮ ಗುರಿಯ ಮಾರ್ಗದಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ .. ಅಜಾದರ ದೇಶಪ್ರೇಮದ ಉತ್ಕಟತೆಯೇ ಹಾಗಿತ್ತು. ಒಂದು ಕಡೆ ಆಂಗ್ಲರ ಪೋಲೀಸ್ ಪಡೆ ಅಜಾದರ ಬಂಧನಕ್ಕೆ ಹಗಲಿರುಳೆನ್ನದೇ ತುಡಿಯುತ್ತಿತ್ತು. ಅಜಾದರ ಬಳಿಯಲ್ಲೋ ನಂಬಿಗಸ್ಥರ ಪಡೆಯೇ ಇಲ್ಲ.... ಇದ್ದವರಲ್ಲಿ ಕೆಲವು ಜನ ಗೋ ಮುಖ ವ್ಯಾಘ್ರಗಳು...
ಆಗಿನ ಕಾಲಕ್ಕೆ ಅಜಾದರನ್ನು ಹಿಡಿದು ಕೊಟ್ಟವರಿಗೆ 30000 ರೂಪಾಯಿಗಳ ಬಹುಮಾನ ಘೋಷಿಸಿತ್ತು ಆಂಗ್ಲ ಸರ್ಕಾರ.. ಆಜಾದರ ಬಂಧನಕ್ಕಾಗಿ ವಿಶೇಷ ಪಡೆಯನ್ನೇ ರಚಿಸಿತ್ತು... ರಾಯ್ ಶಂಭುನಾಥ ಅನ್ನುವ ಗುಪ್ತಚರ ವಿಭಾಗದ ಸಬ್ ಇನ್ಸ್ ಪೆಕ್ಟರ್ ಗೆ ಅಜಾದರ ಬಂಧನದ ವಿಶೇಷ ಜವಾಬ್ದಾರಿ ಕೊಡಲಾಗಿತ್ತು. ಇವನ ಜೊತೆಗೆ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು ಠೀಕಾರಾಮ್, ಮಹಮ್ಮದ್ ನಾಸಿರ್ ಖಾನ್, ನಾಟ್ ಬಾವರ್, ಠಾಕೂರ್ ವಿಶ್ವೇಶ್ವರ ಸಿಂಹ... ಈ ಗುಪ್ತಚರ ವಿಭಾಗ ಕೆಲಸ ಕಾರ್ಯಗಳಿಗಾಗಿ " ಸೀಕ್ರೆಟ್ ಸರ್ವೀಸ್ ಮನಿ" ಎಂಬ ಖಾತೆಯಲ್ಲಿ ಅಪಾರ ಹಣವಿರುತ್ತಂತೆ... ಇದರ ಬಳಕೆಯಾಗೋದು ಮಾಫೀ ಸಾಕ್ಷಿಗಳಿಂದ ರಹಸ್ಯ ತಿಳಿದುಕೊಳ್ಳುವ ಸಲುವಾಗಿ... ಈ ಹಣವನ್ನು ಉಪಯೋಗಿಸಿಕೊಂಡು ಇನ್ಸ್ ಪೆಕ್ಟರ್ ಶಂಭನಾಥ್ , ಅಜಾದ್ ಬಂಧನಕ್ಕೆ ಅಡಿಪಾಯ ಹಾಕತೊಡಗಿದ... ಅದಕ್ಕೆ ಬಳಸಿಕೊಂಡದ್ದು ವೀರಭದ್ರ ತಿವಾರಿ ಅನ್ನೋ ಗೋ ಮುಖವ್ಯಾಘ್ರನನ್ನು...ಆತನಿಗೆ ಅಜಾದರ ಬಗೆಗಿನ ಮಾಹಿತಿ ಕೊಡುವುದಕ್ಕಾಗಿಯೇ ತಿಂಗಳಿಗೆ 200 ರೂಪಾಯಿ ಕೊಡಲಾಗುತ್ತಿತ್ತು.
ತನ್ನ ಸುತ್ತ ಮುತ್ತ ಬಂಧನದ ಬಲೆ ಬೀಸತೊಡಗಿದ್ದಾರೆ ಅನ್ನೋದರ ಸುಳಿವು ಸಿಕ್ಕಿದ್ದರೂ ಅದರ ಕುರಿತು ಅಜಾದ್ ಗಮನ ಹರಿಸಲಿಲ್ಲ.. ಎಲ್ಲೋ ಮತ್ತೊಂದು ತಪ್ಪು ಮಾಡತೊಡಗಿದರು ಅನ್ನುವ ಹಾಗಿಲ್ಲ ಯಾಕೆಂದರೆ ಇಂತಹಾ ಪರಿಸ್ಥಿತಿಯಲ್ಲೂ ಅಜಾದ್ ಹೋರಾಟದ ಕುರಿತೇ ಯೋಚಿಸುತ್ತಿದ್ದರು... ತಮ್ಮ ಕ್ರಾಂತಿಕಾರಿಗಳಲ್ಲಿ ಕೆಲವರನ್ನು ರಷ್ಯಾಕ್ಕೆ ಕಳುಹಿಸಿ ಕ್ರಾಂತಿ ಕಾರಿ ಚಟುವಟಿಕೆಯಲ್ಲಿ ತರಬೇತಿ ಕೊಡಿಸಬೇಕು ಅನ್ನುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿದ್ದರು ಹಣ ಹೊಂದಿಸುವುದರಲ್ಲಿ ತನ್ನ ಗಮನ ಹರಿಸಿದ್ದರು... ಹಾಗಾಗಿ ತಮ್ಮ ಸುತ್ತ ಬೆಳೆಯುತ್ತಿದ್ದ ವ್ಯೂಹ ಅವರ ಅರಿವಿಗೆ ಬರಲೇ ಇಲ್ಲವೇನೋ...
ಆದಿನ ಶುಕ್ರವಾರ ...ಫೆಬ್ರವರಿ 27, 1931
ಯಶಪಾಲ್, ಸುರೇಂದ್ರ ಪಾಂಡೆಯರನ್ನು ರಷ್ಯಾಕ್ಕೆ ಕಳುಹಿಸುವ ಕುರಿತಾಗಿ ಮಾತನಾಡುವುದಿತ್ತು.. ಹಾಗಾಗಿ ಬೆಳಗ್ಗೆ ಬೇಗನೆ ಎದ್ದಿದ್ದರು... ರಷ್ಯಾದ ಯಾತ್ರೆಗಾಗಿ ಬೇಕಾದ ವಸ್ತುಗಳನ್ನು ಕೊಳ್ಳಲು ಯಶ್ಪಾಲ್ ಮತ್ತು ಸುರೇಂದ್ರ ಪೇಟೆಗೆ ಹೊರಡಲು ಅನುವಾಗುತ್ತಿದ್ದರು... ಅಷ್ಟರಲ್ಲೇ ಅಜಾದ್ ಕೂಡ ಹೊರಡತೊಡಗಿದ... ಬಿಗಿದ ಕಚ್ಚೆ ಪಂಚೆ, ಜುಬ್ಬಾ, ತೋಳಿಲ್ಲದ ಕೋಟು.. ಅದರೊಳಗೆ ಅವನ ಅತಿ ನಂಬುಗೆಯ ಪ್ರಾಣ ಸಂಗಾತಿ...ಅವನ ಗುಂಡಿಗೆಯ ರಕ್ಷಕ.. ಆತನ ಪಿಸ್ತೂಲು " ಬಮ್ ತುಲ್ ಬುಖಾರ್ "... ಅಮೇರಿಕಾದಲ್ಲಿ ತಯಾರಾದ 32 ಬೋರಿನ ಅಟೋಮ್ಯಾಟಿಕ್ ಕೋಲ್ಟ್ ಕ್ಯಾಲಿಬರ್ ಪಿಸ್ತೂಲು...
ಯಶ್ಪಾಲ್ ಮತ್ತು ಸುರೇಂದ್ರ ರೊಡನೆ ನಾನು ಬರುತ್ತೇನೆ ಅಂದ ಅಜಾದ್... ಆದರೆ ಅಜಾದ್ ಹೋಗಲು ಯೋಚಿಸಿದ್ದು ಆಲ್ಫ್ರೆಡ್ ಪಾರ್ಕಿಗೆ. ಒಟ್ಟಿಗೆ ಹೆಜ್ಜೆ ಹಾಕಿದರೂ.. ಯಶ್ಪಾಲ್ ಮತ್ತು ಸುರೇಂದ್ರ ಪೇಟೆಗೆ ಹೋದರು. ಅಜಾದ್ ಆಲ್ಫ್ರೆಡ್ ಪಾರ್ಕಿನ ಸಮೀಪ ಬಂದರು ಅಲ್ಲಿ ಅವರನ್ನು ಕೂಡಿ ಕೊಂಡದ್ದು ಸುಖದೇವ ರಾಜ್... ಇಬ್ಬರೂ ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಾ ಪಾರ್ಕಿನ ಸುತ್ತಾ ನಡೆಯಲಾರಂಭಿಸಿದರು...ದುರದೃಷ್ಟವಶಾತ್ ಈ ನಡಿಗೆ ದುಷ್ಟ ಗುಪ್ತಚರ ಕಂಗಳಿಗೆ ಕಾಣಿಸಿತ್ತು...ಆ ಗುಪ್ತಚರ ಓಡಿ ಹೋಗಿ ಠಾಕೂರ್ ವಿಶ್ವೇಶ್ವರ ಸಿಂಹ ರಿಗೆ ವಿಷಯ ತಿಳಿಸಿಯೇ ಬಿಟ್ಟ..ಇತ್ತ ಇನ್ನೊಬ್ಬ ಇವರ ಚಲನ ವಲನದ ಬಗ್ಗೆ ಗಮನವಿಟ್ಟಿದ್ದ ... ವೀರಭದ್ರ ತಿವಾರಿ... ಅಕಸ್ಮಾತ್ ಆಗಿ ತಿವಾರಿ ಸುಖದೇವರಾಜ್ ಕಣ್ಣಿಗೆ ಕಾಣಿಸಿದ್ದ... ಅದನ್ನು ಆತ ಅಜಾದರಿಗೆ ತಿಳಿಸಿದ ಆದರೆ ಅವರು ಅದನ್ನು ಗಮನಿಸಲ್ಲಿಲ್ಲ... ತಿವಾರಿ ಓಡಿ ಹೋಗಿ ಶಂಭುನಾಥ್ ಬಳಿ ಅಜಾರ ಮಾಹಿತಿ ಕಕ್ಕಿ ಬಿಟ್ಟ...
ಶಂಭುನಾಥ್ ಕೂಡಲೆ ಸದಾ ಸಿದ್ದವಾಗಿರುತ್ತಿದ್ದ ಪಡೆಗೆ ಕರೆ ಮಾಡಿದ...80 ಮಂದಿಯ ಪೋಲೀಸ್ ಪಡೆ ಪಾರ್ಕಿನೆಡೆ ದೌಡಾಯಿಸಿತ್ತು...
ಪಾರ್ಕಿನ ಬಳಿಗೆ ವಿಶ್ವೇಶ್ವರ ಸಿಂಹ, ಡಾಲ್ ಚಂದ್ ಕೂಡ ಆಗಮಿಸಿದರು ದೂರದಿಂದಲೇ ಅಜಾದರನ್ನು ಗುರುತಿಸತೊಡಗಿದರು ... ಖಾತ್ರಿಯಾದೊಡನೆ ಡಾಲ್ ಚಂದ್ ರಿಗೆ ಅವರ ಮೇಲೆ ಕಣ್ಣಿಡಲು ಹೇಳಿದರು... ಡಾಲ್ ಚಂದ್ ಹಲ್ಲುಜ್ಜುವವನಂತೆ ನಟಿಸುತ್ತಾ ರಾಜ್- ಅಜಾದ್ ರನ್ನು ಗಮನಿಸುತ್ತಲೇ ಇದ್ದ ಸುಖದೇವ್ ರಾಜ್ ಗೆ ಈತನನ್ನು ಕಂಡಾಗ ಅದೇಕೋ ಅನುಮಾನವಾಯಿತು ಇದನ್ನು ಅಜಾದರ ಬಳಿ ಕೇಳಿದರೂ ಅಜಾದ್ ಇದಕ್ಕೆ ಮಹತ್ವ ಕೊಡದೆ ತಮ್ಮ ಯೋಜನೆಗಳ ಕುರಿತೇ ಆಲೋಚಿಸತೊಡಗಿದ್ದರು...ಎಂಥಾ ದುರಂತ ಅವರ ಕನಸುಗಳೇ ಅವರ ಮೃತ್ಯುವನ್ನು ಮರೆಮಾಚಿತ್ತು...ಇಬ್ಬರೂ ಸಾಗಿ ನೇರಳೆ ಮರವೊಂದರ ಕೆಳಗೆ ಕುಳಿತರು...
ಇತ್ತ ಇವರ ಸುತ್ತಾ ಪೋಲೀಸ್ ಪಡೆ ಆವರಿಸತೊಡಗಿತು...ವಿಶ್ವೇಶ್ವರ ಸಿಂಹ ತನ್ನ ಪಿಸ್ತೂಲು ಹಿಡಿದು ಪಾರ್ಕಿನ ಒಳಗಡೆ ನುಗ್ಗಲು ಹವಣಿಸುತ್ತಿದ್ದ...ಇನ್ನಷ್ಟು ಜನ ಪೋಲೀಸರ ಆಗಮನವಾಗತೊಡಗಿತು... ರಾಯ್ ಸಾಹೆಬ್ ಚೌಧುರಿ ಬಿಹಾಲ್ ಸಿಂಹ, ಜಿಲ್ಲಾಧಿಕಾರಿ ಮಮ್ ಫೋರ್ಡ್...
ನಟ್ ಬಾವರ್ ತನ್ನ ಕಾರಿನಲ್ಲಿ ಪಾರ್ಕ್ ಪ್ರವೇಶಿಸಿದ... ಇಲ್ಲಾದರೂ ಆಜಾದ್ ಎಚ್ಚೆತ್ತುಕೊಳ್ಳಬಹುದಿತ್ತು , ಆದರೆ ಅಜಾದ್ ತಲೆಯ ತುಂಬಾ... ಕ್ರಾಂತಿ ಕ್ರಾಂತಿ ಅಷ್ಟೇ... ಅಜಾದ್ ಕುಳಿತಿದ್ದ ಸ್ಥಳಕ್ಕೆ ಸುಮಾರು ಹತ್ತು ಗಜ ದೂರದಲ್ಲಿ ನಾಟ್ ಬಾವರನ ಕಾರು ನಿಂತಿತು.. ಕಾರಿನಿಂದ ಇಳಿದವನೆ ಮಿಂಚಿನ ಗತಿಯಲ್ಲಿ " ಯಾರು ನೀವು..?" ಅನ್ನುತ್ತಾ ಟ್ರಿಗ್ಗರ್ ಒತ್ತಿಬಿಟ್ಟ... ಬೆಂಕಿಯುಗುಳುತ್ತಾ ಹೊರಟ ಗುಂಡು ಅಜಾದರ ಬಲತೊಡೆಯನ್ನು ಹೊಕ್ಕಿತ್ತು... ಈ ಅಪ್ರತಿಮ ಹೋರಾಟಗಾರ ತತ್ತರಿಸಿದ್ದು ಬರಿಯ ಒಂದೆರಡು ಕ್ಷಣ ಮಾತ್ರ... ರಕ್ತ ಹರಿಯುತ್ತಿದ್ದರೂ ಛಂಗನೆ ಎದ್ದು ... ನಾಟ್ ಬಾವರ ತೋಳಿಗೆ ಗುರಿ ಇಟ್ಟ... ಅಂತಹಾ ಕ್ಷಣದಲ್ಲೂ ಅಜಾದರ ಗುರಿ ತಪ್ಪಲಿಲ್ಲ... ಗುಂಡು ನಾಟ್ ಬಾವರನ ಬಲತೋಳನ್ನು ಹೊಕ್ಕಿತು ... ಗಾಬರಿ ಗೊಂಡ ಆತ ತನ್ನ ಕಾರಿನೆಡೆಗೆ ಓಡತೊಡಗಿದ... ಅಜಾದರ ಎರಡನೇ ಗುಂಡು ಕಾರಿನ ಚಕ್ರದೆಡೆ.. ಅದೂ ಗುರಿ ತಲುಪಿತ್ತು...ನಾಟ್ ಬಾವರ್ ದಿಕ್ಕೆಟ್ಟು ಹತ್ತಿರದ ಮರದ ಮರೆಗೆ ಓಡಿದ...ಅತ್ತ ವಿಶ್ವೇಶ್ವರ ಸಿಂಹ ಮಲಗಿ ಅಜಾದರೆಡೆ ಗುಂಡು ಹಾರಿಸಿದ ಅದು ಅಜಾದರ ಬಲತೋಳಿನೊಳಕ್ಕೆ ಹೋಯಿತು...ಕೂಡಲೇ ಪಿಸ್ತೂಲು ಎಡಕೈಗೆ ಬಂದಿತು... ಹೋರಾಡುವ ಕೆಚ್ಚಿದ್ದರೂ ಆಜಾದ್ ಸುತ್ತುವರಿಯಲ್ಪಟ್ಟಿದ್ದರು 40 ಜನ ಬಂದೂಕುಧಾರಿಗಳು... ಗುರಿ ಇಟ್ಟು ಕಾದಿದ್ದರು.. ಅಜಾದ್ ಹತ್ತಿರದ ನೇರಳೇ ಮರದ ಮರೆಯನ್ನಾಶ್ರಯಿಸಲು ಹೊರಟರು ಆಗ ಅವರಿಗೆ ಕಂಡದ್ದು ತನ್ನ ಹಳೆಯ ವೈರಿ ವಿಶ್ವೇಶ್ವರ ಸಿಂಹ... ಅಜಾದರ ಪಿಸ್ತೂಲಿನಿಂದ ಮತ್ತೊಂದು ಗುಂಡು ಸಿಡಿಯಿತು ಅದು ನೇರ ಹೋಗಿ ವಿಶ್ವೇಶ್ವರ ಸಿಂಹನ ದವಡೆಯನ್ನು ಹೊಕ್ಕಿತ್ತು... ಕಿರುಚುತ್ತಾ ಆತ ದೂರ ಓಡತೊಡಗಿದ...ಆ ಕ್ಷಣ ಆಜಾದರ ರಕ್ಷಣೆಗೆ ಇದ್ದದ್ದು ನೇರಳೆ ಮರ ಮಾತ್ರ ಮತ್ತೆ ಎಲ್ಲ ಕಡೆ ಪೋಲೀಸರು ನಿಂತಿದ್ದರು.ಮರದ ಮರೆಯಲ್ಲಿ ಸುಖದೇವ್ ರಾಜ್ ಮತ್ತು ಅಜಾದ್ ಗುಂಡು ಹಾರಿಸತೊಡಗಿದರು ಇತ್ತ ಪೋಲೀಸ್ ಪಡೆ ಮೆಲ್ಲ ಮೆಲ್ಲನೆ ಮುಂದುವರಿಯುತ್ತಿತ್ತು... ಇಂತಹಾ ಕ್ಷಣದಲ್ಲೂ ಅಜಾದ್ ತನ್ನ ಸ್ನೇಹಿತನ ಪ್ರಾಣ ರಕ್ಷಣೆಯ ಕುರಿತಾಗಿ ಯೋಚಿಸಿ ಸುಖದೇವರಾಜ್ ಅನ್ನು ದೇಶ ಸೇವೆ ಮುಂದುವರಿಸಿ ಅನ್ನುತ್ತಾ ಒತ್ತಾಯಪೂರ್ವಕವಾಗಿ ಕಳುಹಿಸಿದ.... ಈಗ ಅಜಾದ್ ಒಬ್ಬಂಟಿ... ಆದರೆ ಹೋರಾಟ ಕಂಡರೆ ಪೂರ್ತಿ ಸೈನ್ಯವೇ ಹೋರಾಡಿದಂತಿತ್ತು...ಪೋಲೀಸರ ಕಡೆ ಬಿಟ್ಟ ಪ್ರತಿಯೊಂದು ಗುಂಡಿನ ಲೆಕ್ಕಾಚಾರ ಅಜಾದನ ಬಳಿ ಇತ್ತು ಕೊನೆಯ ಗುಂಡು ಆತನಿಗೆ ಆತನ ಪ್ರತಿಜ್ನೆಯನ್ನು ನೆನಪಿಸಿತು ..." ಇನ್ನೆಂದೂ ಪೋಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ"... ಮತ್ತಿನ್ನೇನು ಶತ್ರುಗಳ ಕಡೆ ಮುಖ ಮಾಡಿದ್ದ ಪಿಸ್ತೂಲು ಮೆಲ್ಲನೆ ಆತನ ತಲೆಯ ಬಳಿ ಹೋಯಿತು... ಕ್ಷಣಾರ್ಧದಲ್ಲಿ ಅದರೊಳಗಿನ ಗುಂಡು "ಢಂ" ಎಂದು ಅವರ ತಲೆಯನ್ನು ಭೇದಿಸಿತು. ಮೈ ಅಜಾದ್ ಹೂಂ ಔರ್ ಅಜಾದ್ ಹೀ ರಹೂಂಗಾ ಅನ್ನುತ್ತಿದ್ದ ಅಜಾದ್.... ಅಜಾದ್ ಆಗಿ ಹೋದ... ಅಜಾದ್ ತಾಯಿ ಭಾರತಿಗೆ ತನ್ನ ಪ್ರಾಣದಾರತಿಯನ್ನು ಬೆಳಗಿದರು. ಆಂಗ್ಲರನ್ನು ಕಾಡುತ್ತಿದ್ದ ಕ್ರಾಂತಿಕಾರಿಯೊಬ್ಬ ಅಸುನೀಗಿದ್ದ... ಆದರೆ ಆಂಗ್ಲರಿಗೆ ಅಜಾದರ ಶವದ ಮೇಲೂ ಭಯ ... ಸಾವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಜಾದ್ ಶವದ ಮೇಲೂ ಗುಂಡು ಹಾರಿಸಿದ್ದರಂತೆ...
ಇಡಿಯ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಅಜಾದ್ ವಿಶಿಷ್ಟ ವ್ಯಕ್ತಿ... ಜೀವನವಿಡೀ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಮಾತು ಉಳಿಸುವ ಸಲುವಾಗಿ ಅತ್ಮಾರ್ಪಣೆ ಮಾಡಿದ ಇನ್ನೊಬ್ಬ ಹೋರಾಟಗಾರ ನನ್ನ ದೃಷ್ಟಿಗೆ ಇನ್ನೂ ಬಿದ್ದಿಲ್ಲ, ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅಜಾದ್ ಅವರ ಜೀವನಗಾಥೆ ನೋಡುವಾಗ ನನ್ನ ಕಣ್ಣಿಗೆ ಅದೇಕೋ ಭೀಷ್ಮ ಪಿತಾಮಹ ಕಂಡರು... ಆತನೂ ಅಖಂಡ ಬ್ರಹ್ಮಾಚಾರಿ ಈತನೂ ಅಖಂಡ ಬ್ರಹ್ಮಾಚಾರಿ... ಆತನೂ ತನ್ನ ಮಾತನ್ನು ಉಳಿಸಿಕೊಂಡಾತ ಈತನು ಮಾತನ್ನು ಉಳಿಸಿಕೊಂಡಾತ ಇಬ್ಬರೂ ಅಪ್ರತಿಮ ಹೋರಾಟಗಾರರು... ಭೀಷ್ಮ ತನ್ನ ವಂಶದ ಒಳಿತಿಗಾಗಿ ಜೀವನ ತೇದ... ಆದರೆ ಅಜಾದನ ಜೀವನದ ಕ್ಷಣಕ್ಷಣವೂ ತಾಯಿ ಭಾರತಿಯ ಪಾಲಿಗೇ ಮೀಸಲು...
ಇಂತಹಾ ಮಹಾನ್ ಚೇತನದ ಜೀವನಗಾಥೆ ಓದಿ ಮುಗಿಸಿದಾಗ ನನ್ನ ಕಣ್ಣು ತೇವಗೊಂಡಿತ್ತು...ಎದೆ ಉಬ್ಬಿ ನಿಂತಿತ್ತು... ಅಜೇಯ ಅನ್ನೋ ಅಜಾದರ ಜೀವನಗಾಥೆಯ ಸಾಗರದಿಂದ ನಾನು ನಿಮಗೆ ಉಣಬಡಿಸಿದ್ದು ನನ್ನ ಬೊಗಸೆಯೊಳಗೆ ಬಂದದ್ದನ್ನು ಮಾತ್ರ.ನನ್ನದೇ ವಾಕ್ಯಗಳು ರುಚಿಸದೇ ಇರಬಹುದು ನಿಜವಾದ ರುಚಿ ಸಿಗಬೇಕಾದರೆ ಬಾಬು ಕೃಷ್ಣಮೂರ್ತಿಯವರ " ಅಜೇಯ " ಓದಿ.... ನಾನು ಬರೆದುದನೆಲ್ಲ ಪ್ರೀತಿಯಿಂದ ಓದಿ ಆರು ಭಾಗಗಳಷ್ಟು ಬರೆಯೋಕೆ ಸ್ಪೂರ್ತಿ ನೀಡಿದ ಎಲ್ಲರಿಗೂ ವಂದನೆಗಳು...
ಕ್ರಾಂತಿಕಾರಿ ಅಜಾದ್ ಅಮರ್ ರಹೇ.

No comments:

Post a Comment