Saturday 31 October 2015

ಅಪ್ಪ ಇರದೇ ಕಳೆದ ಒಂದು ವರ್ಷ.....



ಒಂದು ವರ್ಷ ಹಿಂದೆ ಇದೇ ದಿನ ನನ್ನ ಬಾಳಿನ ಅತ್ಯಂತ ಕೆಟ್ಟ ದಿನ ನನ್ನೆದುರು ಬಂದು ನಿಂತಿತ್ತು. ಕೆಟ್ಟ ದಿನ ಅನ್ನುವುದಕ್ಕಿಂತಲೂ ಕೆಟ್ಟ ಸಮಯ ಅಂತಲೇ ಹೇಳಬಹುದೇನೋ.... ಯಾಕೆಂದರೆ ಆಗ ತಾನೇ ನಾನು ನನ್ನ ಚಿಕ್ಕಪ್ಪನನ್ನ ಕಳೆದುಕೊಂಡು ಹದಿಮೂರು ದಿನಗಳಷ್ಟೇ ಆಗಿತ್ತು. ಚಿಕ್ಕಪ್ಪನ ವೈಕುಂಠ ಸಮಾರಾಧನೆಯ ದಿನವೇ ಯಮಧರ್ಮರಾಯ ನನ್ನ ತಂದೆಯನ್ನು ತನ್ನ ಬಳಿ ಕರೆಸಿಕೊಂಡು ಬಿಟ್ಟ. ಹದಿನೈದು ದಿನಗಳೊಳಗೆ ನಮ್ಮ ಮನೆಯಲ್ಲಿ ಎರಡೆರಡು ಸಾವು.. ಸೂತಕ ಮುಗಿಯಿತೆನ್ನುವಷ್ಟರಲ್ಲಿ ಮತ್ತೆ ಸೂತಕ. ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆದ ದೇವಸ್ಥಾನದ ಪಕ್ಕದ ಸಭಾಂಗಣದ ಹೊರ ಪ್ರಾಂಗಣದಲ್ಲಿ ಹಠಾತ್ ಹೃದಯಾಘಾತವಾಗಿ ಕುಸಿದು ಬಿದ್ದ ನನ್ನ ತಂದೆ ಆಸ್ಪತ್ರೆಗೆ ಹೋಗುವ ಮುನ್ನವೇ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದರು. ತುಂಬಿದ ಬಸುರಿ ನನ್ನ ಕೊನೆಯ ಅಕ್ಕ, ಅಮ್ಮ ಇವರನ್ನೆಲ್ಲಾ ಯಾವ ರೀತಿ ಸಮಾಧಾನಿಸಲಿ ಅನ್ನೋದು ನಗಾಗ ಹೊಳೆಯಲೇ ಇಲ್ಲ . ದಟ್ಟ ಕಾಡಿನ ನಡುವೆ ದಿಕ್ಕು ತಪ್ಪಿ ನಿಂತ ಪರಿಸ್ಥಿತಿ... ಎಲ್ಲವನ್ನೂ ದೇವರ ಮೇಲೆಯೇ ಬಿಟ್ಟು ಬಿಟ್ಟೆ... ಅವನಿಚ್ಛೆಯಂತೆಯೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಕಾಲದ ಪ್ರವಾಹದಲ್ಲಿ ಕೊಚ್ಚಿ ಹೋದೆ.
ಆ ಕ್ಷಣಗಳೇನೋ ಕಳೆದು ಹೋದವು ಆದರೆ ನನ್ನ ಮುಂದೆ ದೊಡ್ದದೊಂದು ಸವಾಲು ನಿಂತು ಬಿಟ್ಟಿತ್ತು. ಯಾಕೆಂದರೆ ನಮ್ಮದು ಕುಟುಂಬದ ದೇವರ ಮನೆ, ದಿನ ನಿತ್ಯ ಎರಡು ಬಾರಿ ಪೂಜೆ, ಹಬ್ಬಗಳಲ್ಲಿ ವಿಶೇಷ ಪೂಜೆ, ಚೌತಿ, ನವರಾತ್ರಿ ಹಬ್ಬ ಇನ್ನೂ ವಿಶೇಷ. ದಿನ ನಿತ್ಯದ ಪೂಜೆಯಾದರೋ ನಾನೇ ಮಾಡುತ್ತಿದ್ದದ್ದು ಆದರೆ ವಿಶೇಷ ಪೂಜೆಗಳೆಲ್ಲವನ್ನೂ ಅಪ್ಪನೇ ಮಾಡುತ್ತಿದ್ದುದು. ಅದೇನೆ ಜವಾಬ್ದಾರಿಗಳಿದ್ದರೂ ಎಲ್ಲವನ್ನೂ ತಾವೇ ಹೊರುತ್ತಿದ್ದವರು, ಈ ರೀತಿ ಎಲ್ಲವನ್ನೂ ತಾನೇ ಮಾಡುತ್ತಿದ್ದರಿಂದಲೋ ಏನೋ ನನಗೆ ಜವಾಬ್ದಾರಿ ಅನ್ನೋದು ಏನು ಅನ್ನುವುದರ ಕುರಿತು ಯೋಚನೆಯೇ ಇದ್ದಿರಲಿಲ್ಲ.... ಎಲ್ಲವನ್ನೂ ಅಪ್ಪ ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ವರ್ಷಕ್ಕೊಮ್ಮೆ ಮಾಡುವ ದೈವಾರಾಧನೆಯ ವಿಧಿ ವಿಧಾನಗಳ್ಯಾವುದೂ ಗೊತ್ತಿರಲಿಲ್ಲ.... ಹೇಗೆ ಮಾಡೋದು...? ಅಪ್ಪನ ಅನುಪಸ್ಥಿತಿ ನನ್ನನ್ನ ತುಂಬಾನೇ ಕಾಡುತ್ತಿತ್ತು. ಅದು ಹೇಗೋ ನಮ್ಮ ದೈವಗಳ ಪುನರ್ ಪ್ರತಿಷ್ಠಾಪನೆ ಮಾಡಿದವರ ಬಳಿ ಕೇಳಿ ಅದರ ಪ್ರಕಾರವೇ ಮಾಡಿ ಆಯಿತು.
ಮುಂದೆ ಇದ್ದದ್ದು ಚೌತಿ. ನಮ್ಮಲ್ಲಿ ಗಣಪತಿಯ ಮೂರ್ತಿ ಮಾಡಿ ಅದರ ಪ್ರತಿಷ್ಠಾಪನೆಯಾಗಿ ಮಧ್ಯಾಹ್ನ ಪೂಜೆ ಮತ್ತು ರಾತ್ರಿ ಪೂಜೆ ಆದ ಬಳಿಕ ರಾತ್ರಿಗೆ ವಿಸರ್ಜನೆ. ಇದು ನಡೆದು ಕೊಂಡು ಬಂದ ಪದ್ದತಿ. ಅದರಲ್ಲೂ ವಿಶೇಷ ಅಂದ್ರೆ ಅಪ್ಪ ಚೌತಿಯ ಮುಂಚಿನ ದಿನವೇ ಗಣಪತಿಯ ಮೂರ್ತಿ ಮಾಡಲು ಪ್ರಾರಂಭಿಸುತ್ತಿದ್ದರು. ಬಹಳ ಹಿಂದಿನಿಂದಲೂ ಇದೇ ಪದ್ದತಿ... ಆದರೆ ನನಗೆ ಮಣ್ಣಿನಲ್ಲಿ ಮೂರ್ತಿ ಮಾಡುವುದು ಹೇಗೆ ಅನ್ನುವ ಬಗ್ಗೆ ಸ್ವಲ್ಪವೂ ಜ್ನಾನವಿದ್ದಿರಲಿಲ್ಲ. ಅಪ್ಪ ಮಾಡುತ್ತಿದ್ದುದನ್ನ ನೋಡುತ್ತಿದ್ದೆ, ಆದರೆ ನಾನೇ ಮಾಡಬೇಕು ಅನ್ನುವಾಗ ಏನೋ ಆತಂಕ. ಅದಕ್ಕಾಗೇ ಸ್ವಲ್ಪ ದಿನಗಳ ಮುಂಚಿತವಾಗಿಯೇ ಮೂರ್ತಿ ಮಾಡೋಕೆ ಶುರು ಮಾಡಿಬಿಟ್ಟೆ. ಆದರೆ ದಿನವೂ ಸ್ವಲ್ಪ ಸ್ವಲ್ಪ ಮಾಡಿದಂತೆಲ್ಲಾ ಮರುದಿನಕ್ಕೆ ಒಣಗಿ ಜೋಡಿಸಿದ ಭಾಗವೆಲ್ಲ ಬಿರುಕು ಬಿಡೋಕೆ ಶುರುವಾಗುತ್ತಿತ್ತು... ಏನಪ್ಪಾ ಇದು ಈ ತರ ಅಗ್ತಾ ಇದೆ, ಅನ್ನುವಾಗ ಅಪ್ಪ ಮೊದಲು ಹೇಳುತ್ತಿದ್ದ ಘಟನೆಗಳೆಲ್ಲ ನೆನಪಾಯಿತು. ಅಪ್ಪನೂ ಮೊದಲು ಊರಿಗೆ ಬರುತ್ತಿದ್ದಾಗ ( ಅವರು ಮೊದಲು ಕೊಯಮುತ್ತೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಿಶೇಷಗಳಿದ್ದಾಗ ಊರಿಗೆ ಬರುತ್ತಿದ್ದರು.) ಚೌತಿ ಗಣಪತಿಯನ್ನು ಪುರುಸೊತ್ತಿನಲ್ಲಿ ಚೆನ್ನಾಗೆ ಮಾಡಬೇಕು ಅಂತ ಬೇಗನೆ ಬರೋಕೆ ಹಲವಾರು ಪ್ರಯತ್ನ ಮಾಡಿದ್ದರಂತೆ... ಆದರೂ ಅದ್ಯಾಕೋ ಕೊನೆಗೂ ಈಡೇರದೆ, ಕೊನೆಯಲ್ಲಿ ಚೌತಿಯ ಮುನ್ನಾ ದಿನವೇ ಮೂರ್ತಿ ಆಗುತ್ತಿದ್ದುದು. ಹೀಗೆ ಹಲವು ಪ್ರಯತ್ನ ಮಾಡಿ ಅಂತಹಾ ಯೋಜನೆಗಳನ್ನೇ ಕೈ ಬಿಟ್ಟು ಶಿಸ್ತಿನಿಂದ ಮುನ್ನಾದಿನವೇ ಮೂರ್ತಿ ಮಾಡುವ ಪರಿಪಾಠವನ್ನಿಟ್ಟುಕೊಂಡಿದ್ದರಂತೆ... ನನಗನಿಸಿತು. ಹೀಗೆ ಅಪ್ಪನೇ ಸೋತು ಕೈ ಬಿಟ್ಟ ಪ್ರಯತ್ನವನ್ನ ನಾನು ಕೈಗೆತ್ತಿಕೊಂಡರೆ ಅದು ಸಾಧ್ಯವಾದೀತೆ...? ಕೊನೆಗೆ ಮಾಡಿದ್ದಷ್ಟನ್ನೂ ಒದ್ದೆ ಬಟ್ಟೆಯಲ್ಲಿ ಸುತ್ತಿ ಸರಿಯಾಗಿ ನೀರು ಹಾಕುತ್ತಾ ಮುನ್ನಾದಿನದವರೆಗೆ ಕಾದು ಅದೇ ದಿನವೇ ಶುರು ಹಚ್ಚಿಕೊಂಡೆ... ನಮ್ಮ ಮನೆ ದೇವರ ಆಶೀರ್ವಾದವೋ ಅಥವಾ ನನ್ನ ಅಪ್ಪನ ಆಶೀರ್ವಾದವೋ ಯಾವ ರೀತಿ ಮೂರ್ತಿ ರೂಪ ಪಡೆಯುತ್ತಾ ಹೋಯಿತೆಂದರೆ ನನಗೀಗಲೂ ಆಶ್ಚರ್ಯವಾಗುತ್ತೆ.... ನನ್ನಿಂದ ಇದು ಸಾಧ್ಯವಾಯಿತಾ....? ಅಂತ ಆತ್ಮರೂಪಿಯಾಗಿರೋ ನನ್ನಪ್ಪನ ಸಹಾಯವಿಲ್ಲದೆ ಖಂಡಿತಾ ಇದು ಸಾಧ್ಯವಾಗಿರಲಿಕ್ಕಿಲ್ಲ. ಅದೇ ರೀತಿ ನವರಾತ್ರಿ. ನಮ್ಮನೆಯಲ್ಲಿ ಒಂಭತ್ತು ದಿನ ರಾತ್ರಿ ದೇವಿಯ ಆರಾಧನೆ, ಹತ್ತನೆಯ ದಿನ ಬೆಳಿಗ್ಗೆ ತೆನೆ ಕಟ್ಟೋದು, ಮಧ್ಯಾಹ್ನ ವಿಸರ್ಜನಾ ಪೂಜೆ. ಇದನ್ನೂ ನನಗೆ ತಿಳಿದಷ್ಟರ ಮಟ್ಟಿಗೆ ಅಪ್ಪ ಮಾಡಿದಂತೆಯೇ ಮಾಡಿದ್ದೆ. ಈ ರೀತಿ ಪ್ರತೀ ಹಬ್ಬಗಳು ಬಂದಾಗಲೆಲ್ಲಾ ಅಪ್ಪನ ಅನುಪಸ್ಥಿತಿ ನಮ್ಮನ್ನ ಕಾಡುತ್ತಿತ್ತು.
ನನ್ನದೂ ನನ್ನ ಅಪ್ಪನದೂ ವಿಚಿತ್ರ ರೀತಿಯ ಒಡನಾಟ.... ಅಪ್ಪ ನನಗೆ ಹೆದರುತ್ತಿದ್ದರು... ನಾನು ಅಪ್ಪನಿಗೆ. ಮೊದಲಿನಿಂದಲೂ ನಾನು ಮತ್ತು ಅಕ್ಕಂದಿರಿಗೆಲ್ಲಾ ಅಪ್ಪ ಅಂದರೆ ಅದೇನೋ ಭಯ. ಸಲುಗೆ ಅನ್ನೋದು ಬಹಳಾನೆ ಕಮ್ಮಿ. ಅದರೂ ಪ್ರೀತಿಗೇನೂ ಕಮ್ಮಿಯಿದ್ದಿರಲಿಲ್ಲ. ನಮ್ಮ ಕೆಲಸಗಳೇನಿದ್ದರೂ ಅಮ್ಮನ ಮುಖಾಂತರವೇ.... ಅದಾಗಿಯೂ ಅಪ್ಪ ಅಮ್ಮನಿಗೆ ಜಗಳಾವಾಗುತ್ತಿದ್ದರೆ ನಾವೆಲ್ಲರೂ ಅಪ್ಪನ ಪರವಾಗಿಯೇ ಮಾತಾಡಿ ಅಮ್ಮನನ್ನ ಸುಮ್ಮನಾಗಿಸುತ್ತಿದ್ದೆವು. ಅವರಿಗ್ಯಾಕೆ ನನ್ನ ಕಂಡರೆ ಭಯ ಅನ್ನೋದು ನನಗಿನ್ನೂ ಅರ್ಥವಾಗಿಲ್ಲ ಅಥವಾ ಅದು ಬೆಳೆದ ಮಗನಿಗೆ ಕೊಡುತಿದ್ದ ಬೆಲೆಯೋ ಏನೋ... ಇದನ್ನ ಭಯ ಅಂತ ಹೇಳೋಕೆ ಕಾರಣ ನಾನೇದರೂ ಕೆಲಸ ತಡಮಾಡೋದು ( ಅಪ್ಪ ಬಹಳಾನೇ ಚುರುಕು ಯಾವುದೇ ಸಮಾರಂಭಗಳಿರಲಿ ಸಮಯಕ್ಕೆ ಸರಿಯಾಗಿ ಆಗಬೇಕು ಇಲ್ಲಾಂದ್ರೆ ಸಿಡಿ ಸಿಡಿ ಅನ್ನೊರು.... ಬೇರೆಯವರ ಸಮಾರಂಭಗಳಿಗೂ ಅವರು ಬರುವುದಕ್ಕಿಂತ ಮುಂಚಿತವಾಗಿಯೇ ಸಭಾಂಗಣಕ್ಕೆಲ್ಲಾ ಹೋಗುತ್ತಿದ್ದವರು. ಒಂದು ಸಮಾರಂಭ ಅವರ ಮೇಲ್ವಿಚಾರಿಕೆಯಲ್ಲಿ ನಡೆಯುತ್ತಿತ್ತು ಅಂದರೆ ಅದು ಯಾವಾಗಲೂ ಸುಸೂತ್ರವೇ..... ಆದರೆ ಒಂದಷ್ಟು ಬೈಗುಳಗಳಂತು ಗ್ಯಾರಂಟಿ.) ಅಥವಾ ನಾನೇದರೂ ತಪ್ಪುಗಳನ್ನ ಮಾಡಿದರೆ ನಾನಿಲ್ಲದಾಗಲೇ ಅಪ್ಪ ನನ್ನ ಬೈಯುತ್ತಿದ್ದುದು. ನನ್ನೆದುರು ಏನೂ ಹೇಳುತ್ತಿರಲಿಲ್ಲ.
ಈ ಕುರಿತಾಗಿ ನೆನಪಿಗೆ ಬರೋ ಇನ್ನೊಂದು ಘಟನೆ ನಮ್ಮ ಮನೆಯ ದೇವರ ಕೋಣೆಯನ್ನ ಸರಿ ಪಡಿಸಿ ಹೊಸ ಮಂಟಪ ಮತ್ತು ದೇವರ ಪುನರ್ ಪ್ರತಿಷ್ಠೆಯ ಕೆಲಸ ಆಗುತ್ತಿದ್ದಾಗಿನ ಸಮಯ. ದೇವರ ಕೋಣೆಗೆ ಟೈಲ್ಸ್ ಹಾಕುತ್ತಿದ್ದೆವು. ತಂದಿದ್ದ ಟೈಲ್ಸ್ ಸ್ವಲ್ಪ ಕಮ್ಮಿಯಾಗಿತ್ತು, ನಾನೋ ಕೆಲಸಕ್ಕೆ ಹೋಗಿದ್ದೆ ಸೆಕೆಂಡ್ ಶಿಫ್ಟ್. ನಾನು ರಾತ್ರಿ ಹನ್ನೊಂದು ಗಂಟೆಗೆ ಬರುವಷ್ಟರಲ್ಲಿ ದೇವರ ಕೋಣೆಯ ಎದುರು ಭಾಗದಲ್ಲಿ ಬೇರೆ ಬೇರೆ ಥರದ ತುಂಡು ತುಂಡು ಟೈಲ್ಸ್ ಗಳನೆಲ್ಲಾ ಒಟ್ಟು ಮಾಡಿ ಹಾಗೆ ಫಿಕ್ಸ್ ಮಾಡಿದ್ದರು . ಒಂದು ಪೀಸ್ ಗಾಗಿ ಯಾಕೆ ಪುನಹಾ ಅಂಗಡಿಗೆ ಹೋಗೋದು ಅಂತ. ನನಗೆ ತುಂಬಾನೆ ಸಿಟ್ಟು ಬಂತು. ಛೇ ಇಷ್ಟು ಖರ್ಚು ಮಾಡಿ ಮಾಡುವಾಗ ಎಲ್ಲರಿಗೆ ಕಾಣೋ ಥರ ತುಂಡು ತುಂಡು ಟೈಲ್ಸ್ ಏನಿದು...? ಅಂತ ರಾತ್ರಿ ಬಂದವನೇ ಅಕ್ಕನ ಹತ್ತಿರ ಹೇಳಿದ್ದೆ. ಮರುದಿನ ನನಗೆ ಫಸ್ಟ್ ಶಿಫ್ಟ್ ಅಂದರೆ ಮುಂಚಿನ ದಿನ ರಾತ್ರಿ ಹನ್ನೊಂದು ಗಂಟೆಗೆ ಬಂದವ ಮರುದಿನ ನಾಲಕ್ಕೂವರೆಗೆ ಎದ್ದು ಕೆಲಸಕ್ಕೆ ಹೋಗಿದ್ದೆ. ಆ ದಿನ ನನ್ನ ಕೆಲಸ ಮುಗಿಸಿ ಬಂದು ನೋಡುವಾಗ ತುಂಡು ತುಂಡು ಟೈಲ್ಸ್ ಗೆ ಬದಲಾಗಿ ಚೆಂದದ ಒಂದೇ ಪೀಸ್ ಟೈಲ್ಸ್ ಫಿಕ್ಸ್ ಆಗಿತ್ತು. ಬೆಳಿಗ್ಗೆ ಅಕ್ಕ ಮಾತಾಡಿದ್ದನ್ನ ಕೇಳಿದವರೆ... ಅದನ್ನ ತೆಗಿಸಿ ಹೊಸ ಟೈಲ್ಸ್ ತಂದು ಕೆಲಸ ಮುಗಿಸಿ ಬಿಟ್ಟಿದ್ದರು. ಅದನ್ನ ನೋಡಿದಾಗ ಇಂಥಾ ಅಪ್ಪನನ್ನ ಪಡೆಯೋಕೆ ನಾನು ಪುಣ್ಯ ಮಾಡಿದ್ದೆನೇನೋ ಅಂತಾನೇ ಅನಿಸೋದು. ಯಾಕೆಂದರೆ ಮಗನಿಗೆ ಇಷ್ಟವಾಗಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಅದನ್ನೆಲ್ಲಾ ತೆಗೆಸಿ ನನಗಿಷ್ಟವಾಗುವ ರೀತಿಯಲ್ಲಿ ಮಾಡಿಸಿದ್ದರಲ್ಲ..
ಅವರ ವ್ಯಕ್ತಿತ್ವವೇ ಹಾಗೆ ಸಮಾಜಕ್ಕೆ ದುಡಿಯೋದು ಅಂದರೆ ತನ್ನೆಲ್ಲವನ್ನೂ ಅರ್ಪಿಸಿಕೊಂಡು ಬಿಡುವುದು. ಅವರು ನಾನು ಕಲಿತ ಶಾಲೆಯಲ್ಲಿ ಬರೀ ಟ್ರಸ್ಟಿ ಆದರೂ ಶಾಲೆಯಲ್ಲಿ ಕ್ರೀಡಾಕೂಟವಾದರೆ ಮಾಸ್ಟರುಗಳೆಲ್ಲಾ ನೆರಳಿನಲ್ಲಿದ್ದರೂ ಇವರು ಬಿಸಿಲಲ್ಲಿರುತ್ತಿದ್ದರು. ಅದನ್ನ ಈಗಲೂ ಮಾಸ್ಟರುಗಳು ನೆನಪಿಸಿಕೊಳ್ಳುತ್ತಾರೆ. ಇನ್ನು ಶಾಲಾ ವಾರ್ಷಿಕೋತ್ಸವ ಇತ್ತೆಂದರೆ ಪೌರಾಣಿಕ ನಾಟಕಗಳ ನಿರ್ದೇಶನ ಇವುಗಳೆಲ್ಲವೂ ಇವರದ್ದೇ. ತನ್ನ ಪ್ರಾಯಕ್ಕೂ ಮೀರಿ ದುಡಿಯುತ್ತಿದ್ದ ಅವರ ಉತ್ಸಾಹ ಕೆಲವೊಮ್ಮೆ ನನ್ನ ಯೌವನದ ಶಕ್ತಿಯನ್ನೂ ಸೋಲಿಸಿ ಬಿಡುತ್ತಿತ್ತು. ನಮ್ಮ ಸಮುದಾಯದ ಸಂಘಗಳ ಕೆಲಸ ಕಾರ್ಯಗಳನ್ನ ಕಾರ್ಯದರ್ಶಿಯಾಗಿ ಮುಂದುವರೆಸಿದ ರೀತಿ ಶ್ಲಾಘನೀಯವೇ. ಬಹುಶ ಇದನ್ನ ನಾನು ನನ್ನಪ್ಪ ಅನ್ನುತ್ತಾ ಬಡಾಯಿ ಕೊಚ್ಚುವುದಕ್ಕಾಗಿ ಹೇಳುತ್ತಿಲ್ಲ. ಇವೆಲ್ಲವೂ ಕೂಡ ನನ್ನನ್ನ ಕಂಡಾಗ ಹಲವಾರು ಜನಗಳು ಹೇಳಿದುದರ ಮೇಲೆ ಬರೆಯುತ್ತಿದ್ದೇನೆ. ಅವರ ಬೆಲೆ ಈಗ ಅರ್ಥವಾಗ್ತ ಇದೆ ಅನ್ನುವಾಗ ಅವರ ಮುಖದಲ್ಲೆಲ್ಲೂ ಕಪಟತನ ಸುಳಿದಾಡುವುದೇ ಇಲ್ಲ. ಮಹಾನ್ ಸ್ವಾಭಿಮಾನಿ ನಾನು ದುಡಿಯಲು ಶುರು ಮಾಡಿದ ನಂತರ ಇದುವರೆಗೂ ಒಮ್ಮೆಯೂ ನನ್ನ ಬಳಿ ಹಣ ಕೇಳಿದ ನೆನಪಿಲ್ಲ. ಯಾಕೆ ಬಿಸಿಲಲ್ಲಿ ನಡೆದುಕೊಂಡಾದರೂ ಹೋಗುತ್ತಿದ್ದರು ಆದರೆ ನನ್ನ ಬಳಿ ಅಲ್ಲಿವರೆಗೆ ಬಿಟ್ಟು ಬಾ ಅಂತ ಹೇಳುತ್ತಿರಲಿಲ್ಲ. ನಾನೇ ಅವರು ಹೊರಟದ್ದನ್ನು ನೋಡಿ ಅವರನ್ನ ಬಿಟ್ಟು ಬರುತ್ತಿದ್ದೆ.
ಒಬ್ಬ ಮಗನಾಗಿ ನಾನು ಪ್ರೀತಿಸುತ್ತಿದ್ದುದಕ್ಕಿಂತಲೂ ನೂರು ಪಟ್ಟು ಅವರು ನನ್ನನ್ನ ಪ್ರೀತಿಸುತ್ತಿದ್ದರು. ನಾನು ಯಕ್ಷಗಾನದಲ್ಲಿ ಮಾಡಿದ ವೇಷಗಳ ಬಗ್ಗೆ ಇತರರಿಗೆ ವರ್ಣಿಸೋದಂದರೆ ಅವರಿಗೆ ಬಹಳಾನೇ ಖುಷಿ. ಅದೂ ಅಂತಲ್ಲ ನಾನೇನೇ ಬಹುಮಾನ ಪಡೆಯುವಂತ ಕೆಲಸ ಮಾಡಲಿ ಅದನ್ನ ಅವರ ಆಪ್ತರೊಂದಿಗೆ ಹಂಚಿಕೊಳ್ಳದೇ ಕುಳಿತಿರುವುದೇ ಇಲ್ಲ. ನಮ್ಮೆದುರು ತೋರ್ಪಡಿಸದಿದ್ದರೂ ಹಿಂದಿನಿಂದ ಪ್ರೀತಿಸುವ ಪರಿಯೇ ಬೇರೆ. ನಾನೇದರೂ ಇವತ್ತು ಈ ರೀತಿ ಇದ್ದೇನೆ ಅಂದರೆ ಅದು ಅವರಿತ್ತ ಸಂಸ್ಕಾರ... ಯಾವ ಕೆಟ್ಟ ಅಭ್ಯಾಸಗಳನ್ನೂ ತನ್ನ ಹತ್ತಿರ ಸುಳಿಯಗೊಡದ ಅವರ ಜೀವನ ನನ್ನನ್ನೂ ಆ ರೀತಿ ಬೆಳೆಸಿತು. ಆದರೆ ಧಾರ್ಮಿಕವಾಗಿ ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ ನಡೆದುಕೊಳ್ಳಲು ನನಗೀಗಲೂ ಅಸಾಧ್ಯ. ಅವರೆಂದೂ ಟೇಬಲಿನ ಮೇಲೆ ಕುಳಿತು ಊಟ ಮಾಡಿದವರೇ ಅಲ್ಲ . ಸಮಾರಂಭಗಳಿಗೇನಾದರೂ ಹೋದರೆ ಪುರೋಹಿತರ ಜೊತೆಗೆ ಕೆಳಗೆ ಕುಳಿತುಕೊಂಡು ಸಂಸ್ಕಾರಯುತವಾಗೇ ಊಟ ಮಾಡುತ್ತಿದ್ದರು. ನನ್ನ ಕೈಲಾದ ಮಟ್ಟಿಗೆ ನಾನು ಪ್ರಯತ್ನ ಪಡುತ್ತೇನೆಯೇ ಹೊರತು ಅವರಂತಾಗಲು ಸಾಧ್ಯವೇ ಇಲ್ಲ. ಎಪ್ಪತ್ತು ದಾಟಿದ ನಂತರವೂ ತನ್ನ ದೇಹವನ್ನ ತಾನು ಹತೋಟಿಯಲ್ಲಿಟ್ಟದ್ದರೇ ಹೊರತು ಅದು ಅವರನ್ನ ಆಳಲು ಬಿಡಲಿಲ್ಲ.
ಬಹುಶ ಅವರು ಸಂಪಾದಿಸಿದ ಪುಣ್ಯದ ಫಲವಾಗಿಯೋ ಏನೋ ಅವರಿಗೆ ಇಂತಹಾ ನಿರಾಯಾಸ ಮರಣ ಸಿಕ್ಕಿತು. ಈಗ ಯಾರೇ ಸಿಗಲಿ ಪ್ರತಿಯೊಬ್ಬರೂ ಅವರು ಪುಣ್ಯಾತ್ಮರು ಅಂತಲೇ ಹೇಳುತ್ತಾರೆ. ಯಾರಿಗೂ ತನ್ನ ಹೊರೆ ಕೊಡದೇ ಭಗವಂತನಲ್ಲಿ ಲೀನವಾದರು. ವರುಷವೊಂದು ಉರುಳಿದೆ. ಆದರೂ ಅವರಿಲ್ಲ ಅನ್ನುವುದನ್ನ ಯಾಕೋ ನಂಬಲಾಗದಂತಾ ಪರಿಸ್ಥಿತಿ. ಇಲ್ಲೇ ಎಲ್ಲೋ ಇದ್ದಾರೆ ಅನ್ನುತ್ತಲೇ ಇರುತ್ತದೆ ನನ್ನ ಮನಸ್ಸು. ಆದರೆ ವಿಧಿಯ ಕಠೋರ ನಿರ್ಣಯವನ್ನ ನಾವು ತಳ್ಳಿ ಹಾಕುವಂತಿಲ್ಲ. ಅಪ್ಪನನ್ನ ಕಳೆದುಕೊಂಡ ನಂತರ ಸ್ವಲ್ಪ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ಕಾರಣ ನನ್ನ ಕೈಯಲ್ಲಿ ಏನೂ ಇಲ್ಲ... ಯಾವ ಬಂಧನವನ್ನ ಭಗವಂತ ನಮ್ಮ ಪಾಲಿಗೆ ಒದಗಿಸಿದ್ದನೋ ಅವನಿಗೆ ಬೇಕಾದ ಸಮಯಕ್ಕೆ ವಾಪಾಸು ಬೇಕು ಎಂದು ಕೇಳಿದರೆ ನಾವು ಇಲ್ಲ ಅನ್ನುದಕ್ಕಾಗುತ್ತದೆಯೇ.... ಆ ರೀತಿ ಕಿತ್ತುಕೊಳ್ಳುವುದಕ್ಕಾಗಿಯೋ ಏನೋ ನೆನಪುಗಳನ್ನ ನಮ್ಮ ಪಾಲಿಗೆ ಬಿಟ್ಟು ಬಿಡುತ್ತಾನೆ. ಆದರೆ ಸಮಯ ಅದನ್ನೂ ಮರೆಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ.
ನನಗೀಗಲೂ ನನ್ನ ಬಗ್ಗೆಯೇ ಬೇಸರ ತರಿಸುವಂತಾದ್ದು ಅಂದರೆ ಅವರು ತೀರಿ ಹೋದ ನನಗೆ ಬೈದಿದ್ದು. ಆ ದಿನ ಚಿಕ್ಕಪ್ಪನ ವೈಕುಂಠ ಸಮಾರಾಧನೆಯಲ್ಲಿ ಬಂದವರಿಗೆಲ್ಲಾ ದಕ್ಷಿಣೆ ಕೊಡುತ್ತಿದ್ದರು, ಅದರ ಮುಂಚಿನ ಎರಡು ದಿನ ಅವರು ತುಂಬಾನೇ ಬಳಲಿದ್ದರು. ಹಾಗಾಗಿ ನಾನಂದೆ " ಅಪ್ಪಾ ನೀವು ಊಟ ಮಾಡಿ ಸಮಯ ಆಯ್ತು..." ಅದಕ್ಕೆ ಅವರಂದರು " ಆಯ್ತು ಇದು (ದಕ್ಷಿಣೆ) ಕೊಡಬೇಕಲ್ವಾ..." ಅದಕ್ಕೆ ನಾನಂದೆ ಅದ್ಯಾರಾದರೂ ಕೊಡ್ತಾರೆ ನೀವು ಊಟ ಮಾಡಿ...." ತನ್ನ ಕೆಲಸವನ್ನ ಮಾಡಲು ಬಿಡುತ್ತಿಲ್ಲ ಅನ್ನೋ ಸಿಟ್ಟಿನಿಂದಲೋ ಏನೋ....." ತಗೋ.... ನೀನೇ ಮಾಡು ಇನ್ನೆಲ್ಲಾ....." ಅಂತಂದರು. ನಾನು ಸುಮ್ಮನಾದೆ. ಆದರೆ ಯಾವ ಘಳಿಗೆಯಲ್ಲಿ ಈ ಮಾತನಾಡಿದರೋ ಏನೋ ಎಲ್ಲವನ್ನೂ ನನ್ನ ಹೆಗಲ ಮೇಲೆಯೇ ಹಾಕಿ ಬಿಟ್ಟರು.... ಛೇ.... ನಾನು ಅವರನ್ನ ಅಷ್ಟು ನೋಯಿಸಿಬಿಟ್ಟೆನಲ್ಲಾ ಅನ್ನೋದು ಈಗಲೂ ಕಾಡುತ್ತೆ. ಇದಕ್ಕಾಗಿ ಕ್ಷಮೆ ಕೇಳಲು ಸಮಯವೂ ಸಿಗಲಿಲ್ಲ..... ಆದರೂ ನನ್ನ ಖಂಡಿತ ಕ್ಷಮಿಸಿದ್ದಾರು ಅಂತ ನನ್ನ ಹೃದಯವನ್ನ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.... ಮನುಷ್ಯನಾಗಿ ಅದೆಷ್ಟೇ ಜನ್ಮ ಇರಲಿ ನಾನು ನಿಮ್ಮ ಮಗನಾಗೇ ಹುಟ್ಟಬೇಕು ಅನ್ನೋದೇ ನನ್ನ ಆಸೆ.
ಇದೇ ಸಮಯದಲ್ಲಿ ನಮ್ಮನ್ನಗಲಿದ ನನ್ನ ಚಿಕ್ಕಪ್ಪನೂ ನೆನಪಾಗಿ ಕಾಡ್ತಾರೆ. ಇವರಿಬ್ಬರ ಆತ್ಮಗಳಿಗೂ ಸದ್ಗತಿ ಸಿಗಲಿ.
ವರುಷ ಉರುಳಿದೆ....
ಆದರಿನ್ನೂ ನೆನಪುಗಳಳಿಯದೆ ಉಳಿದಿದೆ.

No comments:

Post a Comment