Saturday, 31 October 2015

ನಾನೇಕೆ ಕಾಂಗ್ರೆಸ್ ವಿರೋಧಿ.....???ಪ್ರತಿಯೊಬ್ಬನಿಗೂ ಒಂದು ಪಕ್ಷವನ್ನು ಮೆಚ್ಚಿಕೊಳ್ಳಲು ಅಥವಾ ವಿರೋಧಿಸಲು ತನ್ನದೇ ಆದ ಕಾರಣಗಳಿರುತ್ತದೆ.( ಇದಕ್ಕೆ ವ್ಯತರಿಕ್ತವಾಗಿ ನನ್ನ ಅಪ್ಪ ಮೆಚ್ಚಿದ್ದರು, ಹಾಗಾಗಿ ನಾನು ಕೂಡ ಮೆಚ್ಚುತ್ತೇನೆ ಅನ್ನುವವರೂ ಕೆಲವರು ಇರುತ್ತಾರೆ. ಅದನ್ನ ಬಿಟ್ಟು ಬಿಡೋಣ.) ಅದೇ ರೀತಿ ಕಾಂಗ್ರೆಸ್ ಗೆ ನನ್ನ ವಿರೋಧವಿದೆ, ಒಬ್ಬ ದೇಶವನ್ನು ಪ್ರೀತಿಸುವ ಭಾರತೀಯನಾಗಿ ಕಾಂಗ್ರೆಸ್ ನ ಕೆಲವು ಇತಿಹಾಸದ ನಡೆ ಮತ್ತು ಕೆಲವು ವರ್ತಮಾನದ ನಡೆಯನ್ನು ನೋಡಿದಾಗ ನನಗೆ ಈ ಪಕ್ಷ ದೇಶದ ಹಿತಕ್ಕೆ ಮಾರಕ ಎಂದು ಅನಿಸತೊಡಗಿತು.ಸಣ್ಣ ಸಣ್ಣ ಕಾರಣಗಳು ಹಲವಾರಿದ್ದರೂ ಒಂದಷ್ಟು ಮುಖ್ಯ ಕಾರಣಗಳನ್ನ ನಿಮ್ಮ ಜೊತೆ ಹಂಚೆಕೊಳ್ಳಬಯಸುತ್ತೇನೆ.

೧. ಪಕ್ಷದೊಳಗೇ ಇಲ್ಲ ಪ್ರಜಾಪ್ರಭುತ್ವ.
ಈ ಪಕ್ಷದ ಸ್ಥಾಪನೆ ಆದ ಮೊದಲಲ್ಲಿ ಸ್ವಲ್ಪ ಮಟ್ಟಿನ ಪ್ರಜಾ ಪ್ರಭುತ್ವ ಅಂದರೆ ಸರ್ವ ಸದಸ್ಯರ ಮಾತಿಗೆ ಮನ್ನಣೆ ಸಿಕ್ಕಿತ್ತಾದರೂ ಗಾಂಧೀಜಿಯವರ ಸೇರ್ಪಡೆಯ ನಂತರ ಅಲ್ಲಿ ಗಾಂಧೀಜಿಯವರದ್ದೆ ಆಡಳಿತ ಶುರುವಾಯಿತು. ಗಾಂಧೀಜಿಯವರ ಆಳ್ವಿಕೆಯಲ್ಲಿ ಅದೆಷ್ಟೋ ಜನ ಸಮರ್ಥ ವ್ಯಕ್ತಿಗಳಿಗೆ ಅನ್ಯಾಯವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿನ ಸುಭಾಷ್ ಚಂದ್ರ ಬೋಸರಿಗಾದ ಅನ್ಯಾಯ ಇರಬಹುದು, ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭ ಬಾಯಿ ಪಟೇಲ್ ರಿಗಿರಬಹುದು. ಭಗತ್ ಸಿಂಗ್ ಅಥವಾ ಕ್ರಾಂತಿಕಾರಿಗಳಿಗಿರಬಹುದು. ಅಷ್ಟೇ ಏಕೆ ಅವರ ನಿಲುವಿನಿಂದಾಗಿ ವಂದೇ ಮಾತರಂ ಹಾಡು ತುಂಡಾಯಿತು, ದೇಶವೇ ಹೋಲಾಯಿತು. ದೇಶದ ಜನರ ಒಕ್ಕೊರಲ ಅಭಿಪ್ರಾಯವಾದ " ಚರಕ ಇರುವ ಕೇಸರಿ ಧ್ವಜ " ದೇಶದ ಬಾವುಟ ಆಗೋದು ತಪ್ಪಿಹೋಯಿತು. ಹೀಗೆ ಏಕ ವ್ಯಕ್ತಿಯ ಅಭಿಪ್ರಾಯ ಹೇರಿಕೆ ಈ ಪಕ್ಷದಲ್ಲಿ ಮುಂದುವರಿದುಕೊಂಡು ಬಂದಿದೆ. ನೆಹರು, ಇಂದಿರಾಗಾಂಧಿ, ಹೀಗೆ ಸಾಗಿ ಸಾಗಿ ರಾಹುಲ್ ಗಾಂಧಿಯವರೆಗೆ ಬಂದು ಒಂದು ಕುಟುಂಬದ ಸ್ವತ್ತಾಗಿ ಹೋಗಿದೆ. ಈ ರೀತಿ ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ಪಕ್ಷ ದೇಶದ ಜನರ ಅಭಿಪ್ರಾಯಕ್ಕೆ ಬೆಲೆ ಕೊಟ್ಟಾರು ಅನ್ನೋದನ್ನ ನಾ ಹೇಗೆ ನಂಬಲಿ...?

೨. ನೆಹರೂರವರ ಅವಾಂತರಗಳು
ಈ ದೇಶದ ಪ್ರಥಮ ಪ್ರಧಾನಿಯಾದ ನೆಹರೂರವರ ಅವಾಂತರಗಳನ್ನ ಹೇಳಹೊರಟರೆ ಬೇಕಾದಷ್ಟಿವೆ. ಪಾಕಿಸ್ಥಾನವನ್ನು ನಿರ್ನಾಮ ಮಾಡಿಸುವಂಥಾ ಅವಕಾಶವನ್ನು ಯುದ್ಧ ವಿರಾಮ ಘೋಷಿಸಿ ಹಾಳುಗೆಡವಿದ್ದು, ಸೈನ್ಯ ಪ್ರಮುಖರ ಮಾತಿಗೆ ಕಿವಿಗೊಡದೆ ಚೀನಾದೆದುರು ದೇಶದ ಘನತೆಗೆ ಕುಂದು ತಂದಿದ್ದು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕೊಟ್ಟಿದ್ದು ಪ್ರಮುಖವಾದವುಗಳು. ಭಾರತೀಯ ಸಂಸ್ಕೃತಿಯ ಬಗ್ಗೆ ತಿರಸ್ಕಾರವಿದ್ದ ವ್ಯಕ್ತಿಗೆ ಈ ದೇಶದ ಚುಕ್ಕಾಣಿ ಹಿಡಿಯುವ ಭಾಗ್ಯ ಒದಗಿಸಿದ್ದು ಇದೇ ಕಾಂಗ್ರೆಸ್ ಅಲ್ವಾ...ಗೋಹತ್ಯೆ ನಿಷೇಧದ ಮಸೂದೆಗೆ ಮೊದಲ ತಡೆಯಾಗಿದ್ದು ನೆಹರೂರವರು ಅನ್ನೋದನ್ನ ಮರೆಯಲು ಸಾಧ್ಯವೇ... ಒಂದು ರೀತಿಯಲ್ಲಿ ನೋಡಿದರೆ ಗಾಂಧೀಜಿಯವರಂತೆ ನೆಹರೂ ಕೂಡ ಸರ್ವಾಧಿಕಾರಿಯಂತೆ ನಡೆಯತೊಡಗುತ್ತಾ ಸರ್ವರ ಅಭಿಪ್ರಾಯಕ್ಕೆ ಕಿಂಚಿತ್ತು ಗೌರವ ಕೊಡದೆ ತನ್ನದೇ ಹಠ ಸಾಧಿಸತೊಡಗಿದರು. ಒಂದು ಪಕ್ಷದಲ್ಲಿ ಸರ್ವ ಸಮ್ಮತಿಗೆ ಬೆಲೆ ಇಲ್ಲ ಅಂತಾದಲ್ಲಿ ಆ ಪಕ್ಷಕ್ಕೆ ನಾನು ಹೇಗೆ ಗೌರವ ಕೊಡಲಿ....?

೩. ಇಂದಿರಾಗಾಂಧಿಯ ದರ್ಪ....
ದಿಟ್ಟತನವನ್ನ ಮೆಚ್ಚಿ ದುರ್ಗೆಗೆ ಹೋಲಿಸಲ್ಪಟ್ಟರೂ ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿಯಂಥಾ ಘಟನೆ ಸಂಭವಿಸಲು ಕಾರಣೀಕರ್ತೆ ಈಕೆಯೇ.... ಅಧಿಕಾರದ ಅಮಲಿನ ಅತಿರೇಕ ಅಂದರೆ ಇದೇ ಅಲ್ವಾ, ಪಟ್ಟದಾಸೆಗಾಗಿ ಜನರನ್ನೇ ಸಂಕಷ್ಟಕ್ಕೀಡು ಮಾಡಲು ಹಿಂದು ಮುಂದು ನೋಡಲಾರಳು ಅನ್ನುವ ಈಕೆ ಇದೇ ಕಾಂಗ್ರೆಸ್ಸಿನ ನಾಯಕಿ. ಅಧಿಕಾರದ ಮದದಿಂದಾದ ಎಡವಟ್ಟುಗಳ ಕಾರಣದಿಂದಾಗಿ ಆಕೆ ಕೊಲ್ಲಲ್ಪಟ್ಟಳೇನೋ ... ಆದರೆ ಆ ನಂತರ ಆದ ಸಿಖ್ ಧಂಗೆಯಲ್ಲಿ ಕಾಂಗ್ರೆಸ್ಸಿಗರು ಮಾಡಿದ್ದೇನು...? ಅಮಾಯಕ ಸಿಖ್ಖರ ನರಮೇಧವೇ ಆಯಿತು. ತಮ್ಮದೇ ಮನಸೋ ಇಚ್ಛಾ ವರ್ತಿಸುವ ನಾಯಕರು... ಅವರುಗಳ ತಪ್ಪನ್ನೆಲ್ಲಾ ಕಡೆಗಣಿಸಿ ಕುರಿ ಮಂದೆಯಂತೆ ಹಿಂಬಾಲಿಸುವ ಬೆಂಬಲಿಗರು, ಇದೇ ಕಾಂಗ್ರೆಸ್ಸಿನ ಅಂತಃ ಶಕ್ತಿಯೇ...? ತಮ್ಮ ನಾಯಕಿಯ ಹತ್ಯೆಯಾದುದನು ಕಂಡು ರೋಷಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅಮಾಯಕ ಸಿಖ್ ರ ಮಾರಣ ಹೋಮ ಮಾಡಿದರಲ್ಲ... ಇಂಥಾ ರೋಷ, ಭಾರತದ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ನಡೆಸುವ ದಾಳಿಗಳಾದ ಏಕೆ ಮೂಡುವುದಿಲ್ಲ....? ಇದರ ಅರ್ಥ ಕಾಂಗ್ರೆಸ್ಸಿಗರಿಗೆ ದೇಶಕ್ಕಿಂತ ತಮ್ಮ ನಾಯಕ/ಕಿ ಯರೇ ದೊಡ್ಡದೇ....? ದೇಶಕ್ಕಿಂತ ಯಾರೂ ದೊಡ್ದದಲ್ಲ ಅನ್ನುವ ನಂಬಿಕೆಯುಳ್ಳ ನನಗೆ ಇಂಥಾ ಪಕ್ಷ ಹೇಗೆ ತಾನೆ ಮೆಚ್ಚುಗೆಯಾದೀತು...?

೪. ನಿಗೂಢ ರಾಜಕೀಯಗಳು....
ಸುಭಾಶ್ ಚಂದ್ರ ಬೋಸ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಇದೇ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ದೇಶ ತೊರೆದ ಅವರನ್ನ ಸ್ವಾತಂತ್ರ್ಯಾನಂತರ ಆದರ ಪೂರ್ವಕವಾಗಿ ಬರಮಾಡಿಕೊಳ್ಳಬೇಕಾಗಿತ್ತು , ಆದರೆ ನೆಹರೂ ಮತ್ತವರ ಕಾಂಗ್ರೆಸ್ ಸರ್ಕಾರ ಮಾಡಿದ್ದೇನು...? ತನ್ನ ದೇಶದ ಪರಮೋಚ್ಛ ಸ್ವಾತಂತ್ರ್ಯ ಹೋರಾಟಗಾರನ ವಿರುದ್ಧವಾಗಿ ಬ್ರಿಟಿಷರ ಪರವಾಗಿ ನಿಷ್ಠೆ ತೋರಿಸಿತು.... ಬಿಡಿ ಕಾಂಗ್ರೆಸ್ ಕಂಡ ಅತ್ಯಂತ ಉತ್ತಮ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ... ಅವರ ಸಾವಿನಲ್ಲಿ ಅದೇನೋ ನಿಗೂಢತೆ ಆದರೆ ಅದನ್ನು ಬಯಲುಗೊಳಿಸೋ ಇಚ್ಛೆ ಸ್ವತಃ ಕಾಂಗ್ರೆಸ್ ಗೇ ಇಲ್ಲ ಅಂದರೆ ಯಾವೂದೋ ರಾಜಕೀಯ ಒಳಸಂಚು ಇದ್ದಿರಲೇಬೇಕಲ್ವಾ....? ಇದೇ ರೀತಿ ದೇಶ ಕಂಡ ಮತ್ತೋರ್ವ ದೇಶಭಕ್ತ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ... ಇವರ ಸಾವಿನ ಹಿಂದೆಯೂ ರಾಜಕೀಯ "ಕೈ"ವಾಡ ಇದ್ದ ಹಾಗನಿಸುತ್ತದೆ, ಈ ಸಾವುಗಳ ತನಿಖೆ ಸಮರ್ಪಕವಾಗಿಲ್ಲ ಅದಕ್ಕೆ ಬೇಕಾದ ಸರಿಯಾದ ಸಮಜಾಯಿಷಿಕೆ ಇನ್ನೂ ಕಾಂಗ್ರೆಸ್ ನಿಂದ ಸಿಕ್ಕಿಲ್ಲ... ಇದೆಲ್ಲಾ ಕಾಂಗ್ರೆಸ್ ನ ಅಧಿಕಾರದ ಮೋಹಕ್ಕೆ ಹಿಡಿದ ಕನ್ನಡಿಗಳಲ್ಲವೇ...?

೫. ರಾಜೀವ ಗಾಂಧಿಯ "ವಿದೇಶ" ವ್ಯಾಮೋಹ...
ಈ ರೀತಿ ಹೇಳೋದಿಕ್ಕೆ ಅವರು ವಿದೇಶಿ ಹೆಣ್ಣನ್ನು ಮದುವೆ ಆಗಿದ್ದು ಖಂಡಿತಾ ಅಲ್ಲ, ( ಅದು ನಮ್ಮ ದುರ್ದೈವ) ಇದಕ್ಕೆ ಮುಖ್ಯ ಕಾರಣ ದೇಶದಲ್ಲಾದ ದೊಡ್ದ ದುರಂತ " ಭೋಪಾಲ್ ಅನಿಲ ದುರಂತ" ದ ಸಮಯದಲ್ಲಿ ಪ್ರಧಾನಮಂತ್ರಿ ರಾಜೀವ ಗಾಂಧಿ ನಡೆದುಕೊಂಡ ರೀತಿ. ತನ್ನ ದೇಶದ ಜನರನ್ನು ಕಾಪಾಡುವುದಕ್ಕಿಂತಲೂ ಈ ದುರ್ಘಟನೆಯ ಕಾರಣೀಕರ್ತ...ವಾರೆನ್ ಆಂಡರ್ಸನ್ ಅವರನ್ನು ಕಾಪಾಡೋದು ಮುಖ್ಯ ಅಂದು ಕೊಂಡು ಬಿಟ್ಟರಲ್ಲಾ..., ಒಬ್ಬ ವ್ಯಕ್ತಿಯನ್ನು ಅದೂ ಪ್ರಧಾನ ಮಂತ್ರಿಯಾಗಿ ದೇಶಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಯಾವ ರೀತಿ ಸಮರ್ಥಿಸಿಕೊಳ್ಳಲು ಸಾಧ್ಯ...? ಆದರೆ ಕಾಂಗ್ರೆಸಿಗರಿಗೆ ಇದು ದೇಶದ್ರೋಹದ ಕೆಲಸವಾಗಿ ಕಾಣಿಸಲೇ ಇಲ್ಲ. ಮತ್ತೆ ಬೆಂಬಲಕ್ಕೆ ನಿಂತು ಬಿಟ್ಟರು. ನೊಂದ ಜೀವಗಳಿಗೆ ದೇಶದ ಆಡಳಿತ ಪಕ್ಷ ಮತ್ತು ಪ್ರಧಾನಿ ಈ ರೀತಿಯ ಸಹಾನುಭೂತಿ ತೋರಿಸುವುದೇ...? ಇಂಥ ಒಂದು ಪಕ್ಷ ವಿರೋಧಕ್ಕಷ್ಟೇ ಅರ್ಹ ಅಂತನಿಸುವುದಿಲ್ಲವೇ...? (ಭೋಫೋರ್ಸ್ ಹಗರಣ ರಾಜೀವರ ವಿದೇಶ ವ್ಯಾಮೋಹಕ್ಕೆ ಇನ್ನೊಂದು ಉದಾಹರಣೆ ಅಲ್ಲವೇ...)

೬ ಹಗರಣಕ್ಕಾಗಿ ಸೈನಿಕರ ಜೀವವನ್ನು ಪಣವಿಡಲು ತಯಾರು...
ತನ್ನ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಮಾಡಿದ ಹಗರಣಗಳೆಷ್ಟೋ.... ಲೆಕ್ಕ ಹಾಕೋಕೆ ನಾನು ಹೋಗೋದಿಲ್ಲ . ಆದರೆ ಸೈನ್ಯದ ವಿಷಯದಲ್ಲಿ ಹಗರಣ ಮಾಡೋದು ಬಿಟ್ಟಿಲ್ಲವಲ್ಲ ಅದು ಬೇಸರವನ್ನು ತರಿಸುತ್ತದೆ. ಈ ದೇಶದ ರಕ್ಷಣೆಗಾಗಿ ನಿಜವಾಗಿಯು ಪ್ರಾಣವನ್ನು ಪಣವಾಗಿಡುವವರು ಸೈನಿಕರು. ಅಂಥಾ ಸೈನಿಕರ ಬೆನ್ನಿಗೆ ಚೂರಿ ಹಾಕುವುದು ಎಷ್ಟು ಸರಿ..? ಶಸ್ತ್ರಾಸ್ತ್ರ ಖರೀದಿಯಲ್ಲಿ ಕೊನೆಗೆ ಸೈನಿಕರ ಸವಲತ್ತಿನ ಕುರಿತಾದ ಆದರ್ಶ ಹಗರಣ ಇವೆಲ್ಲವನ್ನೂ ಕ್ಷಮಿಸಲಾಗುವಂತದ್ದೇ. ಇತ್ತೀಚಿನ ಘಟನೆ ನೋಡಿ ಇಬ್ಬರು ಸೈನಿಕರ ಕತ್ತನ್ನು ಕಡಿದ ಪಾಕಿನ ಮೇಲೆ ಅದ್ಯಾವ ರಾಜತಾಂತ್ರಿಕ ಒತ್ತಡವನ್ನು ಹೇರಿದೆ...? ಬಿಡಿ ಇನ್ನೊಂದು ಸರ್ಕಾರದ ಅವಧಿಯಲ್ಲಾದದ್ದು ಅನ್ನುವ ಕಾರಣಕ್ಕೆ ಸೈನ್ಯ ತಂದು ಕೊಟ್ಟ ವಿಜಯವನ್ನು ಮರೆಯುವ ಯತ್ನ ಮಾಡಿತಲ್ಲ ಇದು ಸಹಿಸಲು ಸಾಧ್ಯವೇ...ಸೈನಿಕರ ಜೀವಕ್ಕೆ ಬೆಲೆ ಕೊಡದ ಕಾಂಗ್ರೆಸ್ ಮೆಚ್ಚುಗೆಗೆ ಅರ್ಹವೇ...?

೭. ದೇಶಕ್ಕೆ ಮಾರಕವಾದರೂ ಪರವಾಗಿಲ್ಲ ಅಲ್ಪಸಂಖ್ಯಾತರ ಓಲೈಕೆ ಆಗಲೇಬೇಕು
ಅಲ್ಪ ಸಂಖ್ಯಾತರ ಓಲೈಕೆ ಕಾಂಗ್ರೆಸ್ ನ ಹಳೆಯ ಚಾಳಿ, ಇದರಿಂದಾಗಿಯೇ ದೇಶದ ಸ್ವಾತಂತ್ರ್ಯ ಮರಳಿ ತರುವಲ್ಲಿ ಮಹತ್ವದ ಕೊಡುಗೆ ಕೊಟ್ಟ ವಂದೇ ಮಾತರಂ ಹಾಡು ತುಂಡಾಗಿ ಹೋದದ್ದು. ಅದು ಬಹಳ ಹಿಂದಿನದಾಯಿತು ಆದರೆ ಕಾಂಗ್ರೆಸ್ ಸರ್ಕಾರ ಒಂದೆರಡು ವರ್ಷಗಳ (ತಾರೀಖು ನನಗೆ ಸರಿಯಾಗಿ ನೆನಪಿಲ್ಲ) ಹಿಂದೆ ತುಂಡಾದ ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸುವ ಯೋಜನೆ ಹಾಕಿಕೊಂಡಿತು, ಆದರೆ ಈ ವಿಷಯ ಗೊತ್ತಾಗುತ್ತಿದ್ದಂತೆ ಅಲ್ಪಸಂಖ್ಯಾತರ ಪ್ರಬಲ ವಿರೋಧ ಕಂಡು ಬಂದಿತು, ಕೂಡಲೇ ಅವರ ವಿರೋಧಕ್ಕೆ ತಾಯಿ ಭಾರತಿಯ ತಲೆಯನ್ನೇ ಬಾಗಿಸಿಬಿಟ್ಟರಲ್ಲ...ಇದೆಂಥಾ ದುರವಸ್ಥೆ... ತೀರಾ ಇತ್ತೀಚಿನ ಘಟನೆಯೊಂದು ನೆನಪಿಗೆ ಬರುತ್ತದೆ ಅಣ್ಣಾ ಹಜಾರೆಯವರ ಚಳುವಳಿಯ ಸಂಧರ್ಭವೊಂದರಲ್ಲಿ ಒಬ್ಬ ಇಮಾಮ್ " ಮುಸ್ಲಿಮರಿಗೆ ಕರೆ ಕೊಡುತ್ತಾರೆ.... ಅಣ್ಣಾ ಹಜಾರೆಯವರ ಚಳುವಳಿಯಲ್ಲಿ ಭಾಗವಹಿಸಬೇಡಿ ಅಲ್ಲಿ ಭಾರತ ಮಾತಾ ಕೀ ಜೈ ಅನ್ನ ಬೇಕಾಗುತ್ತದೆ " ಅಂತ ಇಂಥಾ ದೇಶದ್ರೋಹದ ಮಾತನ್ನಾಡಿದವನ ಬಗೆಗೆ ಸರ್ಕಾರ ಏನು ಕಠಿಣ ಕ್ರಮ ಕೈಗೊಂಡಿತು...? ಕಾಶ್ಮೀರದಲ್ಲಿ ಭಾರತದ್ದೇ ಧ್ವಜ ಹಾರಿಸಲು ಬಿಡದ ಅಲ್ಲಿನ ಸರ್ಕಾರಕ್ಕೆ ಕೇಂದ್ರದ ಬೆಂಬಲ ಏನನ್ನು ಸೂಚಿಸುತ್ತದೆ. ರಾಷ್ಟ್ರಪ್ರೇಮ ಎನ್ನುವುದು ಎಳ್ಳಷ್ಟಾದರೂ ಇದೆಯಾ...? ಇಂಥಾ ಪಕ್ಷವನ್ನು ವಿರೋಧಿಸದೇ ಮೆಚ್ಚಿಕೊಳ್ಳಲು ಸಾಧ್ಯವೇ....?

೮.ಬಹುಸಂಖ್ಯಾತರ ದಮನಕ್ಕಾಗಿ ಮಾರಕ ಯೋಜನೆಗಳು
ಇಲ್ಲಿನ ಬಹುಸಂಖ್ಯಾತರ ಭಾವನೆಗಳೊಂದಿಗೆ ಆಟ ಆಡುವುದು ಈ ಪಕ್ಷಕ್ಕೆ ಅತ್ಯಂತ ಖುಶಿ ಕೊಡುವ ವಿಷಯವೇನೋ.... ಇತ್ತೀಚೆಗೆ ತರಲು ಬಯಸಿರುವ "ಕೋಮು ಸೌಹಾರ್ದ ಮಸೂದೆ " ಮತ್ತ್ಯಾವುದರ ಪ್ರತೀಕ....? ರಾಮಸೇತುವಿನ ವಿಷಯದಲ್ಲಿ ಕೇಂದ್ರ ನಡೆದುಕೊಳ್ಳುತ್ತಿರುವ ರೀತಿ ಏನು....ಬಾಬರಿ ಮಸೀದಿಯನ್ನು ಕೆಡವಿದ್ದು ಅಲ್ಪಸಂಖ್ಯಾತರ ಭಾವನೆಗೆ ತಂದಿರುವ ಧಕ್ಕೆ ಅನ್ನುವ ಕಾಂಗ್ರೆಸ್ ಈಗ ತಾನೇ ಬಹುಸಂಖ್ಯಾತರ ಭಾವನೆಯನ್ನು ಕೆಡವಲು ಹೊರಟಿದ್ದು ಎಷ್ಟು ಸರಿ....? ಗೋಹತ್ಯಾ ನಿಷೇಧ ಜಾರಿಗೆ ಬರಬೇಕೆನ್ನುವ ಬಹುಸಂಖ್ಯಾತರ ಆಸೆಗೆ ಇನ್ನೂ ಈ ಕೈ ಅಡ್ಡಿಯಾಗಿದೆ ಅಲ್ವಾ...

೯. ಕುಟುಂಬ ರಾಜಕಾರಣ....
ಒಂದು ರೀತಿಯಲ್ಲಿ ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿದೆಯೇ ಅನ್ನೋ ಸಂಸಯ ಬರುತ್ತದೆ. ಕಾರಣ ಇಲ್ಲಿ ಆಡಳಿತ ನಡೆಸುವುದು ಒಂದು ಕುಟುಂಬ . ಪ್ರಧಾನ ಮಂತ್ರಿ ಎನುವುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಿದೆ. ಅಧಿಕಾರದಲ್ಲಿರಬೇಕಾದದ್ದು... ಗಂಡ.... ತಪ್ಪಿದರೆ ಹೆಂಡತಿ...ತಪ್ಪಿದರೆ ಮಗ.... ಇದೇ ರೀತಿ....ಯಾಕೆ ಕಾಂಗ್ರೆಸ್ ಪಕ್ಷದಲ್ಲಿ ಇತರ ಸಮರ್ಥ ನಾಯಕರೇ ಇಲ್ಲವೇ....? ಒಂದು ವೇಳೆ ಇದ್ದಾರೆ ಅಂತಾದರೆ ಅವರನ್ನು ದಾರಿಯಲ್ಲಿನ ಮುಳ್ಳಿನ ತರ ಬದಿಗಿರಿಸಲಾಗುತ್ತದೆ. ಅಸಮರ್ಥರಿಗೆ ಅಧಿಕಾರ ಕೊಡುವ ಈ ರೀತಿಯ ವಂಶಾಡಳಿತವನ್ನ ನಾನೇಕೆ ಬೆಂಬಲಿಸಲಿ...?

೧೦.ಹೀಗೊಬ್ಬ ಯುವರಾಜ....
ಸದ್ಯಕ್ಕೆ ಕಾಂಗ್ರೆಸ್ ತನ್ನ ವಂಶಾಡಳಿತವನ್ನು ಮುಂದುವರೆಸುತ್ತ ಮತ್ತೊಬ್ಬ ಯುವರಾಜನನ್ನು ದೇಶದ ಮುಂದಿರಿಸಿದೆ... ನನ್ನನ್ನು ಕಾಡುವ ಒಂದು ಪ್ರಶ್ನೆ... ಒಬ್ಬ ಡಾಕ್ಟರನ ಮಗ ಅವನ ಅಪ್ಪನ ಕಾರಣದಿಂದಾಗಿ ರೋಗಿಯೊಬ್ಬನ ಶುಶ್ರೂಷೆ ಮಾಡಲು ಯೋಗ್ಯನಾಗುತ್ತಾನೆಯೇ....? ಅಥವಾ ಜನಗಳು ಆತನನ್ನು ಕೂಡ ಡಾಕ್ಟರ್..( ಯಾಕೆಂದರೆ ಆತನ ಅಪ್ಪ ಡಾಕ್ಟರ್ ತಾನೇ) ಎಂದು ಒಪ್ಪಿಕೊಳ್ಳುತ್ತಾರೆಯೇ...? ಇಲ್ಲ ಅಂತಾದಲ್ಲಿ ರಾಜಕೀಯದಲ್ಲ್ಯಾಕೆ ಈ ರೀತಿ ಆಗೋಲ್ಲ. ಆತ ಸಮರ್ಥ ಅಂತಾದಲ್ಲಿ ಒಪ್ಪಿಕೊಳ್ಲೋಣ ಆದರೆ ಆತನ ಅಸಮರ್ಥತೆ ನಮ್ಮ ಕಣ್ಣ ಮುಂದಿರುವಾಗ ಹೇಗೆ ತಾನೆ ಒಪ್ಪಿಕೊಳ್ಳೋಕೆ ಸಾಧ್ಯ....ನಾವೆಲ್ಲ ತಾಯಿ ಎಂದು ಪೂಜಿಸುವ ಭಾರತ ಮಾತೆ ಈತನಿಗೆ ಜೇನು ಗೂಡು... ಮುಂಬೈ ದಾಳಿಯ ಸಂಧರ್ಭದಲ್ಲಿ ದೇಶ ಸಂಕಷ್ಟದ ಸ್ಥಿತಿಯಲ್ಲಿದ್ದಾಗಲೂ ಪಾರ್ಟಿಯ ಮೋಜನ್ನು ಬಿಡಲೊಲ್ಲದ ನಾಯಕನ ಕೈಯಲ್ಲಿ ನನ್ನ ದೇಶವನ್ನು ಹೇಗೆ ಕೊಡಲಿ.... ಮಾತಿನಲ್ಲಿ ಪ್ರಭುದ್ಧತೆ ಇಲ್ಲದಾತನಿಗೆ ನನ್ನದೇನಿದ್ದರೂ ವಿರೋಧವೇ...
ಬಹುಷ ಈರೀತಿ ಪಟ್ಟಿ ಮಾಡುತ್ತಾ ಹೋದರೆ ಮಹಾಭಾರತದ ರೀತಿಯ ದೊಡ್ಡ ಗ್ರಂಥವಾದೀತೇನೋ... ಇರಲಿ ಬಿಡಿ ಒಬ್ಬ ಭಾರತೀಯನಾಗಿ ಈ ದೇಶದ ಹಿತ ನನ್ನ ಮೊದಲ ಆದ್ಯತೆ. ರಾಜಕೀಯ ಏನೇ ಇರಲಿ ಆದರೆ ಅದು ದೇಶಕ್ಕೆ, ದೇಶದ ಸಂಸ್ಕೃತಿಗೆ, ದೇಶದ ಭದ್ರತೆ ಮಾರಕವಾಗಬಾರದು. ಅಲ್ಪ ಸಂಖ್ಯಾತರ ಭಾವನೆಗೆ ಗೌರವ ಹೇಗೆ ಸಿಗಬೇಕೋ ಅದಕ್ಕಿಂತಲೂ ಜಾಸ್ತಿ ಇಲ್ಲಿನ ಮೂಲ ನಾಗರಿಕರಾದ ಬಹುಸಂಖ್ಯಾತರ ಭಾವನೆಗೆ ಮನ್ನಣೆ ಸಿಗಬೇಕು ಅನ್ನುವುದು ನನ್ನ ಭಾವನೆ. ಆದರೆ ಕಾಂಗ್ರೆಸ್ ಗೆ ದೇಶ ಮತ್ತು ಇಲ್ಲಿನ ಸಂಸ್ಕೃತಿ , ಭದ್ರತೆ ಯಾವುದೂ ಬೇಕಿಲ್ಲ, ಆ ಪಕ್ಷಕ್ಕೆ ಬೇಕಾಗಿರುವುದು ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ಸಿಗುವ ಅಧಿಕಾರ... ಅಷ್ಟೇ.... ಹಾಗಾಗಿ ಕಾಂಗ್ರೆಸನ್ನು ಬೆಂಬಲಿಸೋದು ದೇಶದ್ರೋಹಕ್ಕೆ ಸಮ ಅನ್ನೋದು ನನ್ನ ಭಾವನೆ ಅದಕಾಗೇ ಹೇಳಿದ್ದು ನಾನೊಬ್ಬ ಕಾಂಗ್ರೆಸ್ ವಿರೋಧಿ.

No comments:

Post a Comment