Thursday 22 October 2015

ಸನ್ಮಾನ್ಯ ನಿತೀಶ್ ಕುಮಾರ್ ಜೀ....



ನಿನ್ನೆಯ ಜೆ.ಡಿ.ಯು ಸಮಾವೇಶದಲ್ಲಿನ ನಿಮ್ಮ ಮಾತುಗಳನ್ನ ಕೇಳಿದಾಗ ಕೆಲವೊಂದು ವಿಚಾರಗಳನ್ನ ನಿಮ್ಮೊಡನೆ ಕೇಳ ಬೇಕೆನಿಸಿತು, ಯಾಕೆಂದರೆ ನಿಮ್ಮ ಮಾತುಗಳಲ್ಲಿ ಹೆಚ್ಚಿನವು ಮೋದಿ ಅವರ ಬಗೆಗಿನ ಮೂದಲಿಕೆ ಅಂತೆ ನನಗನಿಸಿತು. ಎಲ್ಲೋ ಮೋದಿ ಪ್ರಧಾನಿ ಆದರೆ ಎನ್.ಡಿ.ಎ ಗೆ ಬೆಂಬಲ ಕೊಡುವುದಿಲ್ಲ ಅಂತ ಹೇಳುವ ಪ್ರಯತ್ನ ಅಂತನಿಸಿತು. ನೇರವಾಗಿ ಹೇಳುವ ಎದೆಗಾರಿಕೆ ಇಲ್ಲದ ಹಾಗೆ ಅದೇನೋ ಹೇಳುತ್ತಾರಲ್ಲ ಅಡ್ಡ ಗೋಡೆಯ ಮೇಲಿಟ್ಟ ದೀಪದ ಹಾಗೆ ಮಾತಾಡಿ ಅದ್ಯಾವ ಸಂದೇಶ ಕೊಡಬಯಸಿದಿರೋ ಸರಿಯಾಗಿ ಅರ್ಥ ಆಗಲಿಲ್ಲ ಹಾಗಾಗಿ ಕೆಲವೊಂದು ಸ್ಪಷ್ಟೀಕರಣಗಳನ್ನ ಬಯಸುತ್ತೇನೆ..
1. ನಿನ್ನೆಯ ತಮ್ಮ ಭಾಷಣ ಪ್ರಾರಂಭವಾಗಿದ್ದು ಬಿಹಾರದ ಅಭಿವೃದ್ಧಿಯ ಮಾತುಗಳಿಂದ. ತಾವು ಹೇಳಿದಿರಿ ವಿಕಾಸ ಎಲ್ಲ ಕಡೆಯೂ ಇದೆ ಆದರೆ ವಿಕಾಸದ ಪ್ರಾರಂಭ ಎಲ್ಲಿಂದ ಆಗಿದೆ ಅನ್ನುವುದು ಮುಖ್ಯ ಅಂತ. ಖಂಡಿತ ಒಪ್ಪಿಕೊಳ್ಳೋಣ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಹಾಗಂತ ಮೋದಿಜಿ ಮುಖ್ಯಮಂತ್ರಿ ಆದಾಗ ಗುಜರಾತ್ ಏನೂ ಅಭಿವೃದ್ಧಿಯ ಹೊಸ್ತಿಲಿನಲ್ಲಿ ನಿಂತಿರಲಿಲ್ಲ. ಭೀಕರ ಭೂಕಂಪಕ್ಕೆ ತುತ್ತಾಗಿ ನಲುಗಿ ಹೋಗಿತ್ತು. ಅದೆಷ್ಟೋ ಜನರ ವ್ಯಾಪಾರ ವಹಿವಾಟುಗಳು ನಿಂತು ಹೋಗಿತ್ತು. ರಾಜ್ಯದ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿತ್ತು. ಈಗ ನಿಮ್ಮನ್ನು ಮತ್ತು ಮೋದಿಜಿಯವರನ್ನು ಒಮ್ಮೆ ಹೋಲಿಸಿಕೊಳ್ಳಿ....ವಿಕಾಸದ ಪ್ರಾರಂಭ ಮುಖ್ಯ ಅಂದಿರಲ್ಲ ಈಗಲೂ ಅದೇ ಮಾತಿಗೆ ಬದ್ಧರಾಗಿದ್ದೀರಾ...?
2. ತಾವಂದಿರಿ ನನ್ನದು ಬರಿಯ ವಿಕಾಸ ಅಲ್ಲ, ನ್ಯಾಯದೊಂದಿಗೆ ವಿಕಾಸ. ಹಾಗಿದ್ದರೆ ಗುಜರಾತ್ ನಲ್ಲಿ ಅನ್ಯಾಯದ ವಿಕಾಸ ಆಗಿದೆಯೇ...? ಅನ್ಯಾಯದ ವಿಕಾಸ ಎಂದರೇನು ನನಗಂತೂ ಇದರ ಅರ್ಥ ಗೊತ್ತಿಲ್ಲ...ನಾನು ಕೇಳಿದಂತೆ ಗುಜರಾತ್ ವಿಕಾಸ ಆಗಿದೆ ಅಂತಾದಲ್ಲಿ ಅದು ಪೂರ್ತಿ ಗುಜರಾತ್ ಆಗಿದೆಯೇ ಹೊರತು ಯಾವುದೋ ಒಂದು ಸಮುದಾಯದ ವಿಕಾಸವಷ್ಟೇ ಅಲ್ಲ. ಅಲ್ಲಿ ಇಪ್ಪತ್ತ ನಾಲ್ಕು ಗಂಟೆ ವಿದ್ಯುತ್ ಇದೆ ಅಂತಾದರೆ ಅದು ಗುಜರಾತ್ ನ ಎಲ್ಲಾ ಸಮುದಾಯದವರಿಗೆ ಸಿಗುತ್ತದೆಯೇ ವಿನಹ ಬರಿಯ ಬಹುಸಂಖ್ಯಾತರಿಗೆ ಮಾತ್ರ ಅಲ್ಲ. ಹಾಗೊಂದು ವೇಳೆ ಆಗಿದ್ದಿದ್ದರೆ ರಣ ಹದ್ದುಗಳಂತೆ ಕುಕ್ಕಲು ಕಾದು ಕುಳಿತಿದೆಯಲ್ಲಾ ಈ ಮಾಧ್ಯಮಗಳು... ಅವು ಸುಮ್ಮನೆ ಬಿಟ್ಟಿರುತಿತ್ತೇ...? ಉತ್ತಮ ರಸ್ತೆಗಳ ನಿರ್ಮಾಣವಾದಾಗ ಅದು ಎಲ್ಲಾ ಸಮುದಾಯದವರಿಗೆ ತಾನೆ... ಬರಿಯ ಹಿಂದೂಗಳಿಗೆ ಮಾತ್ರ ಅಂತಲ್ಲವಲ್ಲ. ನರ್ಮದಾ ನದಿಯ ನೀರು ಬರಿ ಹಿಂದೂ ರೈತನ ಗದ್ದೆಗೆ ಮಾತ್ರವಲ್ಲ ಅಲ್ಪ ಸಂಖ್ಯಾತರ ಗದ್ದೆಗೂ ಹರಿದಿದೆಯಲ್ಲಾ... ಹಾಗಿದ್ದರೆ ಮೋದಿ ಅವರ ವಿಕಾಸ ನ್ಯಾಯದ ವಿಕಾಸ ಅಲ್ಲ ಅನ್ನುವ ಕೊಂಕು ಮಾತನ್ನು ಯಾಕೆ ಆಡಿದಿರಿ....?
3. ತಾವಂದಿರಿ ಬಿಹಾರದಲ್ಲಿ ನಾನು ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಅದರಲ್ಲೂ ಮುಸ್ಲಿಂ ಸಮುದಾಯದವರ ವಿಶೇಷ ಕಾಳಜಿ ವಹಿಸಿದ್ದೇನೆ ಅಂತ. ಸ್ವಾಮೀ ಗುಜರಾತಿನಲ್ಲಿ 2002ರ ಘಟನೆಯ ಬಳಿಕ ಯಾವುದೇ ಕೋಮುವಾದೀ ಅಹಿತಕರ ಘಟನೆಗಳು ನಡೆದಿಲ್ಲ ಅನ್ನುವುದು ನಿಮ್ಮ ಗಮನಕ್ಕೆ ಯಾಕೆ ಬರಲಿಲ್ಲ...? ಇದು ಏನನ್ನು ಸೂಚಿಸುತ್ತದೆ. ಸಮಸ್ತರ ರಕ್ಷಣೆ ತಾನೆ.... ತಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತರುವಾಯ ನಡೆದ ಕಾರ್ಪೋರೇಟರ್ ಚುನಾವಣೆಗಳಲ್ಲಿ 24 ಜನ ಮುಸ್ಲಿಂ ಪ್ರತಿನಿಧಿ ಮೋದಿಜಿಯ ಪಕ್ಷದಡಿಯಲ್ಲಿ ನಿಂತು ಜಯಶಾಲಿಯಾಗಿದ್ದಾರೆ. ಹತ್ತು ವರ್ಷದ ಮೋದಿ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರನ್ನ , ಹಿಂದುಳಿದವರನ್ನ ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನುವುದಕ್ಕೆ ನಿಮ್ಮಲ್ಲೇನಾದರೂ ಸಾಕ್ಷ್ಯಾಧಾರ ಇದೆಯೇ....? ಹಾಗಿದ್ದರೆ ಅದನ್ನೇಕೆ ಬಹಿರಂಗ ಪಡಿಸೋದಿಲ್ಲ....?
4. ತಾವಂದಿರಿ ಅಟಲ್ ಜೀ ಹೇಳಿದ ರಾಜಧರ್ಮದ ಪಾಲನೆಯಾಗಬೇಕು ಅಂತ. ಸರ್ವರಿಗೂ ಸಮಾನ ರಕ್ಷಣೆ ಕೊಟ್ಟು, ಎಲ್ಲರ ಅಭಿವೃದ್ಧಿಯನ್ನು ಮಾಡಿದುದು ರಾಜಧರ್ಮ ಅಲ್ಲದೇ ಮತ್ತಿನ್ನೇನು....? ಒಂದು ವೇಳೆ ರಾಜಧರ್ಮದ ಪಾಲನೆ ಆಗಿರದೆ ಇದ್ದರೆ ಮತ್ತೆ ಮೂರನೇ ಬಾರಿ ಮೋದಿ ಆಯ್ಕೆ ಹೇಗಾಗುತಿತ್ತು...? ಮುಂದೆ ಮೋದಿಜಿ ಪ್ರಧಾನ ಮಂತ್ರಿ ಆದರೆ ರಾಜಧರ್ಮದ ಪಾಲನೆ ಆಗೋದಿಲ್ಲ ಅನ್ನುವ ಊಹೆ ಏಕೆ...? ಹತ್ತು ವರ್ಷಗಳಿಂದ ರಾಜಧರ್ಮದ ಪಾಲನೆ ಆದದ್ದು ನಿಮ್ಮ ಕಣ್ಣಿಗೇಕೆ ಕಾಣಿಸುವುದಿಲ್ಲ....?
5. ನೀವಂದಿರಿ ಭಾರತೀಯರು ಭಾವನೆಗೆ ಬೆಲೆ ಕೊಡೋಲ್ಲ... ಅವರು "ಅಕಲ್ ಮಂದ್"(ಬುದ್ಧಿವಂತರು) ಅಂತ. ಹಾಗಿದ್ದಲ್ಲಿ ನಿಮ್ಮಲ್ಲಿ ನಾನು ಕೇಳೋದು ಮತ್ತೆ ಮೂರನೇ ಬಾರಿ ಮೋದಿಜಿಯವರನ್ನೇ ಆಯ್ಕೆ ಮಾಡಿದ ಗುಜರಾತಿಗಳ ನಿರ್ಧಾರವನ್ನು ಬುದ್ಧಿವಂತಿಕೆಯ ನಡೆ ಅಂತ ಯಾಕೆ ತಿಳಿದುಕೊಳ್ಲುವುದಿಲ್ಲ....? ಅದೇ ರೀತಿ ಗುಜರಾತ್ ಮಾದರಿಯ ಅಭಿವೃದ್ಧಿ ದೇಶದಲ್ಲೂ ಆಗಬೇಕೆಂದು ಬಯಸಿ ಅವರನ್ನ ಪ್ರಧಾನಿಯಾಗಿಸಬೇಕು ಅನ್ನುವ ಜನರ ಯೋಚನೆ ಬುದ್ಧಿವಂತಿಕೆಯ ಯೋಚನೆ ಅಂತ ನಿಮಗೇಕೆ ಅನ್ನಿಸುವುದಿಲ್ಲ...?
6.ಇನ್ನು ತಾವು ಮಾತನಾಡುತ್ತಾ ಟೋಪಿ ಕೂಡ ಹಾಕಿಕೊಳ್ಳಬೇಕಾಗುತ್ತೆ ಅಂದಿರಿ... ಯಾಕೆ ಟೋಪಿ ಹಾಕಿಕೊಂಡರೆ ಮಾತ್ರ ಜಾತ್ಯಾತೀತರೇ....? ನಿಮ್ಮಲ್ಲಿ ಅದೆಷ್ಟೋ ಜನ ಮುಸ್ಲಿಂ ಶಾಸಕರಿರಬಹುದು, ಅವರ ಬಳಿ ಹಣೆಗೆ ತಿಲಕವಿಡಿ ಅಂತ ಹೇಳಬಲ್ಲಿರಾ....? ಒಬ್ಬ ಹಿಂದೂ ನೇತಾರ ಟೋಪಿ ಹಾಕಿ ಜಾತ್ಯಾತೀತತೆ ಪ್ರದರ್ಶಿಸಬೇಕು ಅಂತಾದರೆ ಮುಸ್ಲಿಂ ನೇತಾರರು ತಿಲಕವಿಟ್ಟು, ಗೋಮಾಂಸ ತಿನ್ನೋದನ್ನ ವರ್ಜಿಸಿ ಜಾತ್ಯಾತೀತತೆ ಮೆರೆಯಬೇಕಲ್ವಾ...? ಬರಿಯ ಮುಸ್ಲಿಂರಿಗೆ ಖುಷಿ ಆಗುವಂತಾದ್ದನ್ನು ಮಾಡಬೇಕು ಆದರೆ ಅವರು ನಮಗೆ ಖುಷಿ ಆಗುವಂತಾದ್ದನ್ನು ಮಾಡುವ ಅಗತ್ಯವಿಲ್ಲ ... ಇದೆಲ್ಲಿಯ ಸಮಾನತೆ ಸ್ವಾಮೀ.... ? ಮೋದಿ ಜಿಯವರು ಟೋಪಿ ಹಾಕುವವರಲ್ಲ (ಜನರಿಗೆ) ಎನ್ನುವುದು ನಿಮಗ್ಯಾವಾಗ ಅರ್ಥ ವಾಗುತ್ತೆ ?
7. ಇನ್ನು " ಮಾಹೋಲ್ ತೋ ಬನ್ತಾ ರಹ್ ತಾ ಹೈ" ಅಂದಿದ್ದು ,ಈ ನಿಮ್ಮ ಮಾತು ಮೋದಿಜಿಯವರ ಪರ ದೇಶದೆಲ್ಲೆಡೆ ಎದ್ದಿರುವ ಭಾರೀ ಅಲೆಯ ಬಗೆಗಿನ ನಿಮ್ಮ ಹೊಟ್ಟೆ ಕಿಚ್ಚನ್ನು ಪ್ರತಿಬಿಂಬಿಸುತ್ತದೆ ಎನ್ನುವುದು ನನ್ನ ಭಾವನೆ. ಬರಿಯ ಒಂದು ಕಡೆ ಅಲ್ಲ ಸ್ವಾಮೀ ಈ ಅಲೆ ಎದ್ದಿರೋದು..... ಮೋದಿಜಿ ಎಲ್ಲೇ ಹೋದರೂ ಈ ಅಲೆ ಏಳೋದು ಸಹಜವೇ... ಅಂಥಾ ಅಭಿವೃದ್ಧಿಯ ನಿದರ್ಶನವನ್ನ ಕೊಟ್ಟಿದ್ದಾರೆ. ಜನರಿಗೂ ಸಾಕಾಗಿದೆ ಈ ಫೇಕ್ ಸೆಕ್ಯುಲರಿಸಂ. ಜನ ಅಭಿವೃದ್ಧಿಯನ್ನು ಬಯಸುತ್ತಾರೆ. ಹಳೆಯ ಘಟನೆಯನ್ನು ಕೆದಕುತ್ತಾ ಕುಳಿತಿರಲೂ ಯಾರಿಗೂ ಮನಸಿಲ್ಲ, ಯಾವ ಗೋದ್ರೋತ್ತರ ಘಟನೆಗಳಿಗೆ ಮೋದಿ ಅವರನ್ನು ದೂಷಿಸುತ್ತಿದ್ದೀರೋ ಆ ಘಟನೆಗೆ ಮೂಲ ಕಾರಣವೇನು....? ಆ ಕರ ಸೇವಕರ ಜೀವಕ್ಕೆ ಬೆಲೆಯೇ ಇಲ್ಲವೇ....ಇದ್ಯಾವ ರೀತಿಯ ಜಾತ್ಯಾತೀತೆ ಸ್ವಾಮೀ...
8. ಪ್ರಧಾನಿ ಆಗೋ ಕನಸು ಕಾಣುತ್ತಿಲ್ಲ ಅಂದಿರಿ, ಹಾಗಿದ್ದರೆ ಮೋದಿಯವರನ್ನು ಪ್ರಧಾನಿಯಾಗಿ ನೋಡಬೇಕೆನ್ನುವ ದೇಶದ ಬಹುಪಾಲು ಜನರ ಭಾವನೆಗೆ ಯಾಕೆ ಬೆಲೆ ಕೊಡಬಾರದು....? ಒಂದು ವೇಳೆ ಅವರು ಹಾದಿ ತಪ್ಪುವ ನಿರ್ಣಯ ಕೈಗೊಂಡಲ್ಲಿ ಆಗ ನಿಮ್ಮ ಅಸಮಾಧಾನವನ್ನು ತೋರಿಸಿ ಬೆಂಬಲ ಹಿಂಪಡೆದುಕೊಳ್ಳ ಬಹುದಲ್ಲ. ನಿಮ್ಮ ಬಿಹಾರದ ಜನರು ನಿಮ್ಮನ್ನ ಕಣ್ಣು ಮುಚ್ಚಿ ನಂಬಿ ಮುಖ್ಯಮಂತ್ರಿ ಮಾಡಿದ್ದು ಅಲ್ವಾ. ನೀವು ಆಶ್ವಾಸನೆಯನ್ನು ಈಡೇರಿಸಿ ಅಭಿವೃದ್ಧಿ ಮಾಡಬಲ್ಲಿರಿ ಎಂದು ನಂಬಿದರು. ಆವರ ಮುಂದೆ ಯಾವುದೇ ನಿದರ್ಶನ ಇರಲಿಲ್ಲ. ನೀವು ಸಿ.ಎಮ್ ಆಗೋ ಮೊದಲೇ ಸಂದೇಹ ಪಟ್ಟು ವೋಟು ಹಾಕದೆ ಇರಲಿಲ್ಲ ಅಲ್ವಾ. ಹಾಗಿದ್ದರೆ ಜಗತ್ತಿನಲ್ಲಿ ಹಲವು ರಾಷ್ಟ್ರಗಳಿಂದ ಹೊಗಳಿಸಿಕೊಳ್ಳುವಂತಾ ಅಭಿವೃದ್ಧಿಯನ್ನು ಮಾಡಿ ತೋರಿಸಿದಾತನ ಮೇಲೆ ಏಕೆ ನಿಮಗೆ ನಂಬಿಕೆ ಇಲ್ಲ. ಈಗಾಗಲೆ ಅವರು ತಮ್ಮ ಅಭಿವೃದ್ಧಿಯ ದೃಷ್ಟಿಕೋನವನ್ನ ಜಗತ್ತಿನ ಮುಂದಿಟ್ಟಿದ್ದಾರೆ ಅಲ್ವಾ.
ಬಹುಶ ನನಗನಿಸೋದು ಎಲ್ಲಿ ಮೋದಿ ಅವರು ಪ್ರಧಾನಿ ಆಗಿ ದೇಶವನ್ನು ಮುನ್ನಡೆಸಿ ಮತ್ತೆ ನಿಮಗೆಂದಿಗೂ ಪ್ರಧಾನಿ ಗಾದಿ ಮತ್ತೆ ಸಿಗದಂತೆ ಮಾಡಿಯಾರೋ ಎನ್ನುವ ಭಯ ಕಾಡುತ್ತಿರಬೇಕು. ಇಲ್ಲಾವಾಗಿದ್ದಲ್ಲಿ ನೀವು ಈ ರೀತಿಯ ಮಾತುಗಳನ್ನಾಡುತ್ತಿರಲಿಲ್ಲ. ಈ ಮೇಲಿನ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಡುತ್ತದೆ ಎನ್ನುವುದು ನನಗೆ ಗೊತ್ತಿದೆಯಾದರೂ ಒಂದಷ್ಟು ಜನರಿಗೆ ನಿಮ್ಮಲ್ಲೂ ಹುಳುಕಿದೆ ಅನ್ನುವುದು ಗೊತ್ತಾದರೆ ಸಾಕು ಅನ್ನೋದೇ ನನ್ನ ಮನದಾಳದ ಆಶಯ.

No comments:

Post a Comment